

ಅವಿನ್ ಶೆಟ್ಟಿ ಉಡುಪಿ
ಭೂಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಪತ್ರ, ಕ್ರಯ ಪತ್ರ, ವಿಭಾಗ ಪತ್ರ, ಕನ್ವರ್ಷನ್ ಸೇರಿದಂತೆ ಮತ್ತಿತರ ದಾಖಲಾತಿ ನೋಂದಣಿಗಾಗಿ 11ಇ ನಕ್ಷೆ ಮತ್ತು ತತ್ಕಾಲ್‌ಪೋಡಿ ಸಿಗುತ್ತಿಲ್ಲ. ಭೂಮಿ ಸರ್ವೇ ಕಾರ್ಯವೂ ನಡೆಯುತ್ತಿಲ್ಲ. ಇದಕ್ಕೆ ಕಾರಣವಾಗಿರುವುದು ಭೂ ಮಾಪಕರ ಮುಷ್ಕರ.
ರಾಜ್ಯದಲ್ಲಿ ಪರವಾನಗಿ ಪಡೆದ ಭೂಮಾಪಕರು ಎರಡು ತಿಂಗಳಿನಿಂದ ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸುತ್ತಿದ್ದು, ರಾಜ್ಯಾದ್ಯಂತ ಕಂದಾಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಲ್ಲಿವರೆಗೆ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಪರಿಣಾಮ ಸಹಸ್ರಾರು ಅರ್ಜಿದಾರರ 11ಇ ನಕ್ಷೆ ವಿಲೇವಾರಿಗೆ ಬಾಕಿ ಇದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಿ ಹೋಗಿದೆ ಹಣ?: 11ಇ ನಕ್ಷೆ ಮತ್ತು ತತ್ಕಾಲ್‌ಪೋಡಿಗಾಗಿ ಗ್ರಾಮೀಣ ಭಾಗದಲ್ಲಿ 1200 ರೂ. ಮತ್ತು ನಗರ ಭಾಗದಲ್ಲಿ 2200 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಭೂ ಮಾಪಕರಿಗೆ ಸರ್ಕಾರ 800 ರೂಪಾಯಿ ನೀಡಬೇಕು. ಇದರಲ್ಲಿ ವಿಲೇ-ತಕರಾರು ಕಡತಗಳ ಬಾಬ್ತು, ಅಂದರೆ ಸಾರ್ವಜನಿಕರು ಅರ್ಜಿಯೊಂದಿಗೆ ಶುಲ್ಕ ಪಾವತಿಸಿ ಬಳಿಕ ಸರ್ವೇ ಸಮಯದಲ್ಲಿ ಕಾರಣಾಂತರಗಳಿಂದ ಸರ್ವೇ ಬೇಡ ಎಂದ ಪ್ರಕರಣಗಳ ಬಾಬ್ತು ಕೋಟ್ಯಂತರ ರೂ. ಬಾಕಿ ಇರಿಸಿಕೊಳ್ಳಲಾಗಿದೆ. 11ಇ ನಕ್ಷೆ ಸರ್ವೇ ನಡೆದ ಪ್ರಕರಣಗಳಲ್ಲಿ ಮಾತ್ರ ಭೂಮಾಪಕರಿಗೆ ಶುಲ್ಕ ಪಾವತಿಯಾಗಿದೆ. ಹೀಗೆ ಭೂ ಮಾಪಕರ ಪಾಲಿನ ಶುಲ್ಕ ಸರ್ಕಾರ ಕೊಡಬೇಕಿದ್ದು, ಇಲಾಖೆ ಬಳಿ ಲೆಕ್ಕವೇ ಇಲ್ಲ. ಆರ್‌ಟಿಐನಲ್ಲಿಯೂ ದಾರಿ ತಪ್ಪಿಸುವ ಮಾಹಿತಿ ನೀಡಲಾಗಿದೆ. ಹಾಗಾದರೆ ಕೋಟ್ಯಂತರ ರೂಪಾಯಿ ಹಣ ಎಲ್ಲಿ ಹೋಗಿದೆ ಎಂಬುದು ಭೂಮಾಪಕರ ಪ್ರಶ್ನೆ.
ತತ್ಕಾಲ್‌ಪೋಡಿ ಶುಲ್ಕ ಲಕ್ಷಾಂತರ ರೂ. ಬಾಕಿ
ಬಹುಮಾಲೀಕತ್ವದ ಭೂಮಿಯನ್ನು ಸಿಂಗಲ್ ಪಹಣಿ ಮಾಡಿಕೊಡುವ ನಿಟ್ಟಿನಲ್ಲಿ ತುರ್ತು ನಕ್ಷೆ ನೀಡಲು ಸರ್ಕಾರ ತತ್ಕಾಲ್‌ಪೋಡಿ 2013ರಲ್ಲಿ ಆರಂಭಿಸಿದೆ. ಇದಕ್ಕೂ ನಗರ ಭಾಗದಲ್ಲಿ 2200 ರೂ, ಗ್ರಾಮೀಣ ಭಾಗದಲ್ಲಿ 1200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ 800 ರೂ. ಭೂ ಮಾಪಕರಿಗೆ ಸರ್ಕಾರ ಕೊಡಬೇಕು. ಆದರೆ ಇಲ್ಲಿವರೆಗೆ ತತ್ಕಾಲ್‌ಪೋಡಿಯಲ್ಲಿ ಕಾರ್ಯನಿರ್ವಹಿಸಿದ ರಾಜ್ಯದಲ್ಲಿ ಒಬ್ಬ ಭೂ ಮಾಪಕನಿಗೂ ಒಂದು ರೂ. ಶುಲ್ಕ ಸಿಕ್ಕಿಲ್ಲ! ಒಬ್ಬೊಬ್ಬ ಭೂ ಮಾಪಕರಿಗೆ 3ರಿಂದ 4 ಲಕ್ಷ ರೂ, ಬರಲು ಬಾಕಿ ಇದೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಭೂ ಮಾಪಕರು.
ಅಲ್ಲದೆ ಪೋಡಿ ಮುಕ್ತ ಅಭಿಯಾನದಲ್ಲಿ ಕಂದಾಯ ಸಿಬ್ಬಂದಿಗಿಂತ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ ಭೂಮಾಪಕರಿಗೆ ಇದುವರೆಗೆ ಶುಲ್ಕ ನೀಡಿಲ್ಲ. ಇದರಲ್ಲೂ ಲಕ್ಷಾಂತರ ರೂಪಾಯಿ ಸರ್ಕಾರದಿಂದ ಬಾಕಿ ಇದೆ ಎಂದು ಭೂಮಾಪಕರು ಹೇಳುತ್ತಾರೆ.
ಭೂ ಮಾಪಕರಿಗೆ ನೀಡಬೇಕಾದ ಬಾಕಿ ಶುಲ್ಕವನ್ನು ಸರ್ಕಾರ ಕೂಡಲೆ ಬಿಡುಗಡೆಗೊಳಿಸಿದಲ್ಲಿ ನಾವು ಕರ್ತವ್ಯ ಆರಂಭಿಸುತ್ತೇವೆ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದು ನಮಗೂ ಬೇಸರವಾಗುತ್ತಿದೆ. ಎಲ್ಲ ಶಾಸಕರು, ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದು, ನಮ್ಮ ಮನವಿಗೆ ಸರ್ಕಾರ ಸ್ಪಂದಿಸಬೇಕು.
- ದುಷ್ಯಂತ್ ಕುಮಾರ್, ಅಧ್ಯಕ್ಷ, ಉಡುಪಿ ಜಿಲ್ಲಾ ಭೂಮಾಪಕರ ಸಂಘ
ಪರವಾನಗಿ ಹೊಂದಿದ ಭೂ ಮಾಪಕರು ಎರಡು ತಿಂಗಳಿನಿಂದ ಮುಷ್ಕರದ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ 11ಇ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ. ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ. ಉಡುಪಿಯಲ್ಲದೇ ಬೇರೆ ಜಿಲ್ಲೆಗಳಲ್ಲಿಯೂ ಸಮಸ್ಯೆ ಇದ್ದು, ಸರ್ಕಾರದ ಮಟ್ಟದಲ್ಲೇ ಬಗೆಹರಿಯಬೇಕಾದ ವಿಚಾರವಾಗಿದೆ.
-ಜಿ.ಜಗದೀಶ್.ಜಿಲ್ಲಾಧಿಕಾರಿ. ಉಡುಪಿ