

ಕಾರವಾರ: ಕಾಳಿ ಜಲವಿದ್ಯುತ್ ಯೋಜನೆಯ ಭಾಗವಾಗಿರುವ ಕೊಡಸಳ್ಳಿ ಅಣೆಕಟ್ಟೆಯ ಇಕ್ಕೆಲಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತ ಮತ್ತು ಸರ್ಕಾರ ಸಮರ್ಪಕ ಅಧ್ಯಯನ ನಡೆಸದೇ ನಿರ್ಲಕ್ಷ್ಯ ವಹಿಸಿದೆ.
2019 ರಲ್ಲಿ ಕೊಡಸಳ್ಳಿ ಅಣೆಕಟ್ಟೆಯ ಬಲ ಭಾಗದ ರಸ್ತೆ ಬಿರುಕು ಬಿಟ್ಟಿತ್ತು. 2021 ಜುಲೈ 22 ಹಾಗೂ 23 ರಂದು ಸುರಿದ ಮಹಾ ಮಳೆಗೆ ಕೊಡಸಳ್ಳಿ ಅಣೆಕಟ್ಟೆಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿತ್ತು. ಅಣೆಕಟ್ಟೆಯ ನೂರು ಮೀಟರ್ ಅಂತರದಲ್ಲಿ ಇಡೀ ಗುಡ್ಡವೇ ಜರಿದು ಬಂದಿತ್ತು. ಸುಮಾರು 100 ಎಕರೆಗೂ ಅಧಿಕ ಅರಣ್ಯ ನಾಶವಾಗಿತ್ತು. ಎಡ ಬದಿಗೂ ಕುಸಿತ ಉಂಟಾಗಿತ್ತು. ಕೆಲ ದಿನ ಅಣೆಕಟ್ಟೆಗೆ ರಸ್ತೆಯೂ ಬಂದ್ ಆಗಿತ್ತು.
ಆಗ ಸರ್ಕಾರದ ಮನವಿಯಂತೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಬಂದು ಭೇಟಿ ನೀಡಿ, ಪ್ರಾಥಮಿಕ ಅಧ್ಯಯನ ವರದಿಯನ್ನು 2022 ರಲ್ಲಿ ಸಲ್ಲಿಸಿದ್ದರು. ಅದನ್ನಾಧರಿಸಿ ವಿಸ್ತ್ರತ ಅಧ್ಯಯನ ವರದಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಆದರೆ ಜಿಎಸ್ಐ ಕೊಡಸಳ್ಳಿ ಬಗ್ಗೆ ಅಧ್ಯಯನವನ್ನು ಇದುವರೆಗೆ ನಡೆಸಿಲ್ಲ ಎನ್ನಲಾಗಿದೆ. ಆ ಭಾಗದಲ್ಲಿ ಕೆಪಿಸಿ ತಾತ್ಕಾಲಿಕ ನಿರ್ವಹಣಾ ಕಾಮಗಾರಿ ಬಿಟ್ಟರೆ ಬರ್ಯಾವುದೇ ಕ್ರಮ ವಹಿಸಿಲ್ಲ.
ಜಿಎಸ್ಐ ಅಧಿಕಾರಿಗಳು ನೀಡಿದ ಪ್ರಾಥಮಿಕ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಪ್ರದೇಶಗಳಿವೆ ಎಂದು ಪಟ್ಟಿ ಮಾಡಲಾಗಿತ್ತು. ಅದನ್ನಾಧರಿಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬೇಕು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.
ಕೊಡಸಳ್ಳಿ ಅಣೆಕಟ್ಟೆಯ ಕೆಳಗೆ ಕದ್ರಾ ಅಣೆಕಟ್ಟೆ ಇದೆ. ಕಾಳಿ ನದಿ ಇಕ್ಕೆಲಗಳಲ್ಲಿ 50 ಕ್ಕೂ ಹೆಚ್ಚು ಹಳ್ಳಿಗಳಿವೆ. ಸಾವಿರಾರು ಜನಸಂಖ್ಯೆ ಇದೆ. ಕೊಡಸಳ್ಳಿ ಅಣೆಕಟ್ಟೆಗೆ ಅಣೆಕಟ್ಟೆಗೆ ಅಪಾಯ ಉಂಟಾದಲ್ಲಿ ಸಮಸ್ಯೆ ಉಂಟಾಗಲಿದೆ. 2019 ರಲ್ಲಿ ನೆರೆಯ ಸಂದರ್ಭದಲ್ಲಿ ಅಣೆಕಟ್ಟೆ ಒಡೆದಿದೆ ಎಂಬ ಸುದ್ದಿ ಹರಡಿ ಆತಂಕ ಉಂಟಾಗಿತ್ತು.
2021 ರ ಜುಲೈ ಮಹಾ ಮಳೆಗೆ ಯಲ್ಲಾಪುರದ ಕಳಚೆ ಎಂಬ ಊರಿನ ನೆಲವೇ ಕಳಚಿ ಬಿದ್ದಿತ್ತು. ಮನೆ ತೋಟ ಎಲ್ಲ ಜರಿದು ಊರಿನ ಸ್ವರೂಪವೇ ಬದಲಾಗಿಹೋಗಿತ್ತು. 300 ಕುಟುಂಬಗಳು ನಿರಾಶ್ರಿತವಾಗಿದ್ದವು. 268 ಹೆಕ್ಟೇರ್ ಕೃಷಿ ಭೂಮಿ ಹಾಳಾಗಿತ್ತು. 1953 ಹೆಕ್ಟೇರ್ ಅರಣ್ಯ ಮಣ್ಣಿನಡಿ ಸಿಲುಕಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿದ್ದರು.ಗುಡ್ಡ ಕುಸಿತದ ಕಾರಣ ತಿಳಿಯಲು ವಿಶೇಷ ಅಧ್ಯಯನ ನಡೆಸುವ ಘೋಷಣೆ ಮಾಡಿದ್ದರು. ಅದರಂತೆ ಅದೇ ವರ್ಷ ಜಿಐಎಸ್ ತಂಡ ಭೇಟಿ ನೀಡಿ, ಪ್ರಾಥಮಿಕ ವರದಿ ನೀಡಿತ್ತು. 2023 ರ ಲ್ಲಿ ತಂಡ ಇನ್ನೊಮ್ಮೆ ಭೇಟಿ ನೀಡಿದೆ ಆದರೆ, ಇದುವರೆಗೂ ಅಧ್ಯಯನ ವರದಿ ಜಿಲ್ಲಾಡಳಿತದ ಕೈ ಸೇರಿಲ್ಲ.
ಕಳಚೆ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಅಲ್ಲಿನ ಜನ ಭಯಗೊಂಡಿದ್ದರು. ಊರಿಗೆ ಕಡಿತವಾಗಿದ್ದ ರಸ್ತೆ, ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಮನೆ ಹಾನಿ, ಬೆಳೆ ಹಾನಿಗೆ ಅಲ್ಪ ಪರಿಹಾರ ನೀಡಲಾಗಿತ್ತು. ಆದರೆ, ಬೆಳೆದು ನಿಂತ ಅಡಕೆ ತೋಟಗಳೇ ನಾಪತ್ತೆಯಾಗಿದ್ದು, ಅದಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಮೇಲಾಗಿ ಮತ್ತೊಮ್ಮ ಭೂ ಕುಸಿತ ಉಂಟಾದರೆ ತಮ್ಮ ಬದುಕೇ ದುಸ್ತರ ಎಂದು ಅರಿತ ಕಳಚೆ ಗ್ರಾಮದ 657 ಕುಟುಂಬಗಳು ಸ್ಥಳಾಂತಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದವು. ಸೂಕ್ತ ಪರಿಹಾರ ನೀಡುವಂತೆ ವಿನಂತಿಸಿದ್ದವು. ಕಳಚೆ ಗ್ರಾಮ ಸ್ಥಳಾಂತರಕ್ಕೆ ಸುಮಾರು 100 ಕೋಟಿ ರೂ. ವಿಶೇಷ ಪ್ಯಾಕೇಜ್ ಬೇಕು ಎಂದು ಅಂದಾಜಿಸಲಾಗಿತ್ತು. ಆದರೆ, ಸರ್ಕಾರ ಆ ಜನರ ಬೇಡಿಕೆಗೆ ಮನ್ನಣೆ ನೀಡಿಲ್ಲ.
ಗುಡ್ಡ ಕುಸಿತ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲು ಅನುದಾನ ಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು.ಗಂಗೂಬಾಯಿ ಮಾನಕರ್ಜಿಲ್ಲಾಧಿಕಾರಿ, ಉತ್ತರ ಕನ್ನಡ