ಮತ್ತೆ ಕಾದಿದೆಯಾ ಆತಂಕ ?

Land Slide in Sirsi-kumata Road
Published on

ಶಿರಸಿ: ಶಿರಸಿ ಕುಮಟಾ ರಸ್ತೆಯಲ್ಲಿ ಗುರುವಾರ ಮತ್ತೆ ಅಲ್ಪ ಪ್ರಮಾಣದ ಮಣ್ಣು ಕುಸಿತವಾಗಿದೆ. ಇದರಿಂದಾಗಿ ರಸ್ತೆಯ ಅರ್ಧದಷ್ಟು ಭಾಗ ಮಣ್ಣಿನಿಂದ ಆವೃತಗೊಂಡಿತ್ತು. ವಾಹನಗಳು ಅರ್ಧ ರಸ್ತೆಯಲ್ಲಿಯೇ ದಾಟುವ ಸ್ಥಿತಿ ನಿರ್ವಣವಾಗಿತ್ತು.

ಕಳೆದ ಕೆಳ ದಿನಗಳ ಹಿಂದೆ ಇಲ್ಲಿಯ ರಾಗಿಹೊಸಳ್ಳಿ ಬಳಿ ಬೃಹತ್ ಪ್ರಮಾಣದ ಗುಡ್ಡ ಕುಸಿದು ಐದು ದಿನಗಳ ಕಾಲ ಶಿರಸಿ -ಕುಮಟಾ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ರಾತ್ರಿಯ ಭರ್ಜರಿ ಮಳೆಗೆ ಮತ್ತೆ ಮಣ್ಣು ಕುಸಿಯಲಾರಂಭಿಸಿದೆ.

ಮತ್ತೆ ಕಾದಿದೆಯಾ ಆತಂಕ?

ಶಿರಸಿ - ಕುಮಟಾ ರಸ್ತೆ ಅನೇಕ ಕಡೆ ಇನ್ನೂ ದರೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಮುಖ್ಯವಾಗಿ ರಾಗಿಹೊಸಳ್ಳಿಯಿಂದ ದೇವಿಮನೆ ಘಟ್ಟ ಪ್ರದೇಶದವರೆಗಿನ ಸ್ಥಳದಲ್ಲಿ ಅನೇಕ ಕಡೆ ರಾಷ್ಟ್ರೀಯ ಹೆದ್ದಾರಿ ನಿರ್ವಣದ ವೇಳೆ 15 ಅಡಿಗೂ ಅಧಿಕ ಮಣ್ಣು ತೆಗೆದು ರಸ್ತೆ ಜಾಗ ತಗ್ಗಿಸಲಾಗಿದೆ. ಇದೇ ಸ್ಥಿತಿ ಇಲ್ಲಿಯ ಬಂಡಲ, ಮೊಸಳೆಗುಂಡಿಯ ಬಳಿಯೂ ಇದೆ.

ರಾಗಿಹೊಸಳ್ಳಿ ಬಳಿ ಕಳೆದ ಮಳೆಗಾಲದಲ್ಲಿ ಸಹ ಗುಡ್ಡ ಕುಸಿದು ಸಂಚಾರ ವ್ಯತ್ಯಯವಾಗಿತ್ತು. ಈ ವರ್ಷವೂ ಅದೇ ಜಾಗದ ಬಳಿ ಕುಸಿತವಾಗಿತ್ತು. ಆದರೆ, ಇಲ್ಲಿಯ ಪರಿಸ್ಥಿತಿ ಇನ್ನೂ ಗುಡ್ಡ ಕುಸಿಯುವ ಆತಂಕ ಮುಂದುವರಿದಿದೆ. ಇನ್ನೂ ಹಲವಾರು ಕಡೆ 10 ಅಡಿಗೂ ಅಧಿಕ ಎತ್ತರದ ದರೆ ಇದ್ದು ಮಳೆ ಜೋರಾದಲ್ಲಿ ಕುಸಿತಗೊಳ್ಳುವ ಅತಂಕ ಇದೆ.

ರಾಗಿಹೊಸಳ್ಳಿಯಿಂದ ದೇವಿಮನೆ ಘಟ್ಟ ಪ್ರದೇಶದಲ್ಲಿ ಅಬ್ಬರದ ಮಳೆ ಸುರಿಯುವಾಗ ಬೆಟ್ಟದ ಮೇಲಿಂದ ಭರ್ಜರಿ ನೀರು ಹರಿದುಬರುವುದು ಗುಡ್ಡ ಕುಸಿತಕ್ಕೆ ಕಾರಣವಾದರೆ, ಇನ್ನೊಂದೆಡೆ ಗುಡ್ಡದ ಒಳಗಡೆಯಿಂದ ಹರಿದುಬರುವ ನೀರು ಗುಡ್ಡದ ಮಣ್ಣನ್ನು ಸಡಿಲಗೊಳಿಸುತ್ತಿವೆ. ಹೀಗಾಗಿ, ಮಳೆ ಮತ್ತೆ ಜೋರಾದರೆ ಕುಸಿತಗೊಳ್ಳುವ ಆತಂಕ ಇದ್ದೇ ಇದೆ.

ಮಳೆಗಾಲದ ದಿನಗಳಲ್ಲಿ ದೇವಿಮನೆ ಘಟ್ಟದಿಂದ ಬಂಡಲದವರೆಗೂ ಅಬ್ಬರದ ಮಳೆಯೇ ಬರುತ್ತಿದೆ. ಗುರುವಾರ ರಸ್ತೆಗೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ತೆರವುಗೊಳಿಸಲಾಗಿದೆ. | ದೇವರಾಜ ಮರಾಠಿ, ಬಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net