

ಕಾರವಾರ: ಎಡಬಿಡದೇ ಸುರಿದು, ನಗರವನ್ನು ಜಲಾಶಯ ಮಾಡಿದ ಮಳೆ ಶುಕ್ರವಾರ ಬಿಡುವು ನೀಡಿತು. ಗುರುವಾರ ರಾತ್ರಿ ನಗರದ ವಿವಿಧೆಡೆ ತುಂಬಿದ್ದ ನೀರು ಇಳಿದು ಹೋಗಿದ್ದು, ರಾಡಿಯಾದ, ಒದ್ದೆ, ಮುದ್ದೆಯಾದ ವಸ್ತುಗಳನ್ನು ಸ್ವಚ್ಛ ಮಾಡುವಲ್ಲಿ ಮನೆಗಳ ಜನ ಹಾಗೂ ವಿವಿಧ ಅಂಗಡಿ ಮಾಲೀಕರು ಶುಕ್ರವಾರ ತೊಡಗಿದರು.
ಗುರುವಾರ ಇಡೀ ದಿನ ಕಾರವಾರಕ್ಕೆ ಜಲ ಕಂಠಕ ಬಾಧಿಸಿತ್ತು. ರಾತ್ರಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಕೆಲಸ ಮುಗಿಸಿದವರಿಗೆ ಮನೆಗೆ ತೆರಳಲು ಸಾಧ್ಯವಾಗಿಲ್ಲ. ಹೋಟೆಲ್‌ನಲ್ಲಿ ಊಟ ಸಿಗದೇ ಕೆಲವರು ತೊಂದರೆ ಅನುಭವಿಸಿದರು. ಗುರುವಾರ ರಾತ್ರಿ ಕಾರೊಂದು ಜಿಲ್ಲಾ ರಂಗ ಮಂದಿರ ಹಿಂದೆ ಕೋಣೆನಾಲಾಕ್ಕೆ ಬಿದ್ದಿತ್ತು. ಕ್ರೇನ್ ಮೂಲಕ ಅದನ್ನು ಎತ್ತಲಾಯಿತು. ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಆಗೊಮ್ಮೆ, ಈಗೊಮ್ಮೆ ಮಾತ್ರ ಮಳೆ ಸುರಿಯಿತು.
ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ನೇತೃತ್ವದಲ್ಲಿ ಅಧಿಕಾರಿಗಳು ಶುಕ್ರವಾರ ನೀರು ತುಂಬಿದ ವಿವಿಧ ಸ್ಥಳಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಜೆಸಿಬಿ ಮೂಲಕ ವಿವಿಧೆಡೆ ಚರಂಡಿಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆಸಲಾಯಿತು.
ಕಲುಶಿತವಾದ ನೀರು:
ನೀರು ತುಂಬಿದ್ದರಿಂದ ನಗರದ ಹಲವು ಬಾವಿಗಳ ನೀರು ಹೊಲಸಾಗಿದೆ. ಇದರಿಂದ ಬಾವಿ ಸ್ವಚ್ಛ ಮಾಡುವವರಿಗೆ ಭಾರಿ ಬೇಡಿಕೆ ಬಂದಿತ್ತು. ಕೆಲವು ಪ್ರದೇಶಗಳ ಜನರು ಹಣ ಕೊಟ್ಟು ನೀರು ಖರೀದಿಸಿದರು.
ಗ್ಯಾರೇಜ್‌ಗಳಲ್ಲಿ ಕ್ಯೂ:
ವಿವಿಧ ಅಪಾರ್ಟ್ಮೆಂಟ್‌ಗಳ ನಲದಡಿಯ ಪಾರ್ಕಿಂಗ್ ಲಾಟ್‌ನಲ್ಲಿದ್ದ 20 ಕ್ಕೂ ಹೆಚ್ಚು ಕಾರು, ಹಾಗೂ 30 ಕ್ಕೂ ಅಧಿಕ ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಚಾಲು ಮಾಡಲು ಸಾಧ್ಯವಾಗದ ಅವನ್ನು ಟೋಯಿಂಗ್ ಮಾಡಿಕೊಂಡು ಒಯ್ದು ರಿಪೇರಿ ಮಾಡಿಸುವ ಪರಿಸ್ಥಿತಿ ಬಂದಿದೆ. ಕಾರು ಹಾಗೂ ಬೈಕ್ ಗ್ಯಾರೇಜ್‌ಗಳ ಎದುರು ಕ್ಯೂ ಕಂಡುಬಂತು.
ಹೆದ್ದಾರಿ ಕಂಠಕ:
ಅಲಿಗದ್ದಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನೀರು ಮನೆಗಳಿಗೆ ನುಗ್ಗಿ ಅನಾಹುತ ಉಂಟಾಗಿದೆ. ಬಿಣಗಾ-ಕಾರವಾರ ಸುರಂಗದ ನಡುವೆ ಹೆದ್ದಾರಿ ನೀರು ಹರಿಯಲು ಅಲಿಗದ್ದಾಕಡೆ ವ್ಯವಸ್ಥೆ ಮಾಡಲಾಗಿದೆ. ಕೆಳಗಡೆ 10 ಕ್ಕೂ ಅಽಕ ಮನೆಗಳಿಗೆ ಮಣ್ಣು ನೀರು ನುಗ್ಗುತ್ತಿದೆ. ಹಲವು ವರ್ಷಗಳಿಂದ ಇರುವ ನಮಗೆ ಈಗ ಹೆದ್ದಾರಿ ನಿರ್ಮಾಣವಾದ ನಂತರ ಸಮಸ್ಯೆ ಕಾಡುತ್ತಿದೆ ಎಂದು ಅರ್ಚನಾ ಗೌಡ ಗೋಳು ತೋಡಿಕೊಂಡರು. ಸುರೇಶ ಗೌಡ, ರಾಮಕೃಷ್ಣ ಗೌಡ ಹಾಗೂ ಗೋಲಾ ಗೌಡ ಅವರ ಮನೆಗಳಿಗೆ ನೀರು ನುಗ್ಗಿತ್ತು.
ಎಷ್ಟು ಸುರಕ್ಷಿತ ...?
ನಗರದೆಲ್ಲೆಡೆ ಹಲವು ಟಪಾರ್ಟ್ಮೆಂಟ್‌ಗಳಲ್ಲಿ ನೆಲ ಮಹಡಿಯಿಂದ ಒಂದು ಹಂತ ಕೆಳಗೆ (ಬೇಸ್‌ಮೆಂಟ್)ನಲ್ಲಿ ಪಾರ್ಕಿಂಗ್ ಜಾಗ ಬಿಡಲಾಗಿದೆ. ಆದರೆ, ಮಳೆಗಾಲ ಬಂದಾಗಲೆಲ್ಲ ಅಲ್ಲಿ ನೀರು ತುಂಬಿರುತ್ತದೆ. ಬಹುಕಾಲ ನೀರು ನಿಂತುಕೊAಡಿದ್ದರೆ ಕಟ್ಟಡಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಬೇಸ್‌ಮೆಂಟ್ ಪಾರ್ಕಿಗ್ ವ್ಯವಸ್ಥೆ ಮಾಡಿದ ಬಹು ಮಹಡಿ ಕಟ್ಟಡ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ.
ಗುಡ್ಡ ಕುಸಿತ
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಗಾ ಬಳಿ ಗುರುವಾರ ರಾತ್ರಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಹೆದ್ದಾರಿ ಗುತ್ತಿಗೆ ಕಂಪನಿ ಐಆರ್‌ಬಿ ಸಿಬ್ಬಂದಿ ಮಣ್ಣು ತೆರವು ಮಾಡಿ, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಯಾವುದೇ ಕ್ಷಣದಲ್ಲೂ ಮಣ್ಣು ಹೆದ್ದಾರಿಯ ಮೇಲೆ ಕುಸಿದು ಬೀಳುವ ಪರಿಸ್ಥಿತಿ ಇದೆ.
ಕಾರವಾರದಿಂದ ಬಿಣಗಾ ಕಡೆ ತೆರಳುವ ಸುರಂಗದಲ್ಲಿ ಎರಡು ಕಡೆ ಕಲ್ಲುಗಳು ಉರುಳಿ ಬಿದ್ದಿವೆ. ಇನ್ನೂ ಕೆಲವು ಕಡೆ ಬೀಳುವ ಪರಿಸ್ಥಿತಿ ಇದೆ. ಇದರಿಂದ ಸುರಂಗದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಬಿಣಗಾ-ಕಾರವಾರ ದ್ವಿಪಥದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಅಲ್ಲೂ ಗುಡ್ಡದ ಕಲ್ಲು ಉದುರಿ ಬೀಳುತ್ತಿದ್ದು ಅಪಾಯವಿದೆ. ಹಬ್ಬುವಾಡದಲ್ಲಿ ಗುರುವಾರ ಗುಡ್ಡ ಕುಸಿತ ಉಂಟಾಗಿತ್ತು. ಶುಕ್ರವಾರ ಮತ್ತಷ್ಟು ಕುಸಿತ ಉಂಟಾದ ಕಾರಣ ಅಲ್ಲಿನ ಮನೆಗಳನ್ನು ಖಾಲಿ ಮಾಡಿಸಲಾಗಿದೆ. ಜನರು ಓಡಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ನೀರು ತುಂಬಿದ ಮನೆಗಳ ಸಮೀಕ್ಷೆ
ನೀರು ತುಂಬಿ ನಷ್ಟ ಅನುಭವಿಸಿದ ಜನವಸತಿಯ ಮನೆಗಳಿಗೆ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ನೀಡಲು ಅವಕಾಶವಿದೆ. ನಗರದಲ್ಲಿ ಈ ಸಂಬಂಧ ಸಮೀಕ್ಷೆ ಕಾರ್ಯವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನಿಶ್ಚಲ ನರೋನಾ ವಿಜಯವಾಣಿಗೆ ತಿಳಿಸಿದ್ದಾರೆ. ಆದರೆ, ವಾಣಿಜ್ಯ ಕಟ್ಟಡಗಳಿಗೆ ಯಾವುದೇ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಎರಡು ದಿನ ರೆಡ್ ಅಲರ್ಟ್
ಜುಲೈ 14 ಹಾಗೂ 15 ರಂದು ಜಿಲ್ಲೆಯ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎರಡೂ ದಿನ ರೆಡ್ ಅಲರ್ಟ್ ಘೋಷಿಸಿದೆ. 16 ಹಾಗೂ 17 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ನಗರಸಭೆ ಪೌರಾಯುಕ್ತ
ಜಗದೀಶ ಹುಲಿಗೆಜ್ಜಿ
ನೀರು ಹರಿದು ಹೋಗುವ ಜಾಗದಲ್ಲಿ ಕೆಲವರು ಕಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದ ಸಮಸ್ಯೆ ಉಂಟಾಗಿದೆ. ಎಲ್ಲೆಲ್ಲಿ ಅಂಥ ಅತಿಕ್ರಮಣಗಳಿವೆಯೋ ಅಲ್ಲೆಲ್ಲ ತೆರವು ಮಾಡುವ ಕಾರ್ಯ ಮಾಡಲಾಗುವುದು.