ಹೊನ್ನಾವರದಲ್ಲಿ ಗುಡ್ಡ ಕುಸಿತ‌: ಹೆದ್ದಾರಿ ಬಂದ್

Land slide (1)
Published on

ಜಿಲ್ಲೆಯಲ್ಲಿ ಭಾನುವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು,  ಹೊನ್ನಾವರ ತಾಲ್ಲೂಕಿನಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ  ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬ0ಧಪಟ್ಟ ತಾಲೂಕುಗಳ ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ.

 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ. 

ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಿಸಲಾಗಿದೆ 

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳಿಗೆ ತೀವ್ರ ಹಾನಿ ಹಾಗೂ 4 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಗುಂದ, ಚಿಟ್ಟಿಹಿತ್ಲ, ದೇವದಳ್ಳಿಯ ನೇರಪೀಡಿತ ಪ್ರದೇಶದಲ್ಲಿ 13 ಕುಟುಂಬಗಳನ್ನು  ಎನ್ ಡಿಆರ್ ಎಫ್ ತಂಡದ ಮೂಲಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಾನುವಾರು ಪ್ರಾಣ ಹಾನಿ ತಡೆಗೂ ಅಗ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಜಿಲ್ಲಾಡಳಿತದ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಗೆ ಹಾಗೂ ಮೊ.ಸಂ. ಸಂಖ್ಯೆ 94835 11015 ಕರೆ , ಮೆಸೇಜ್, ವಾಟ್ಸಾಪ್ ಸಂದೇಶ ಮತ್ತು ವಾಟ್ಸಾಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಹೊನ್ನಾವರ ಗುಡ್ಡ ಕುಸಿತ

ಹೊನ್ನಾವರ ತಾಲೂಕಿನ ಭಾಸ್ಕೇರಿ ಸಮೀಪದ ವರ್ನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಗುಡ್ಡ ಕುಸಿದು ಕೆಲ ಕಾಲ ಸಂಚಾರ ಬಂದ್ ಆದ ಘಟನೆ ನಡೆದಿದೆ.

ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನ ಜೊತೆಗೆ ಮರಗಳು ಹೆದ್ದಾರಿಯ ಮೇಲೆ ಉರುಳಿದೆ.

ಸ್ಥಳಿಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹೆದ್ದಾರಿ ಮೇಲೆ ಬಿದ್ದಿರುವ ಮರಗಳನ್ನು ಸರಿಸಿ, ಮಣ್ಣನ್ನು ತೆರವುಗೊಳಲಿಸಿ ಸಂಚಾರಕ್ಕೆ ಅನುಕೂಲ ಮಾಡುದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net