ಬಿಡಿಎನಲ್ಲಿ ಭೂ ಹಗರಣ ಬೆಳಕಿಗೆ: ಪರಿಹಾರದ ಸೈಟ್​​​ಗೆ ಸಹಕಾರ ನಿಬಂಧಕರ ತಡೆ

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಿಂದ ಸಹಕಾರ ಗೃಹ ನಿರ್ಮಾಣ ಸಂಘಕ್ಕೆ ನಿವೇಶನ ಒಳಗೊಂಡ ಜಮೀನು ಮಂಜರಾತಿಯಲ್ಲಿ ಅಕ್ರಮ ಎಸೆಗಿರುವ ಆರೋಪ ಕೇಳಿಬಂದಿದೆ. ಕೋಟ್ಯಂತರ ರೂ. ಮೌಲ್ಯದ ಈ ಜಮೀನು ಹಂಚಿಕೆಯು ಹಗರಣದ ರೂಪ ಪಡೆದಿದ್ದು, ಸಹಕಾರ ನಿಬಂಧಕರು ಬಿಡಿಎ ಆಯುಕ್ತರಿಗೆ ಪತ್ರ ಬರೆದು ಮಂಜುರಾತಿ ಅಥವಾ ಸೈಟ್ ಹಂಚಿಕೆ ಮಾಡದಂತೆ ಸೂಚಿಸಿದ್ದಾರೆ.

ಅರ್ಕಾವತಿ ಬಡಾವಣೆಗೆ ವಶಪಡಿಸಿಕೊಂಡಿರುವ ಜಮೀನನ್ನು ಭೂಸ್ವಾಧೀನಕ್ಕೆ ಮುನ್ನವೇ ರೈತರಿಂದ ಜಿಪಿಎ ಮಾಡಿಸಿಕೊಂಡು ನಂತರ ಅದನ್ನು ಖರೀದಿಸಲಾಗಿದೆ ಎಂದು ನಂಬಿಸಲಾದ ದಾಖಲೆಗಳನ್ನು ಗೃಹ ನಿರ್ಮಾಣ ಸಂಘವು ಸೃಷ್ಟಿಸಿ, ಅದನ್ನಾಧರಿಸಿ ಸೈಟ್‌ಗಳ ಮಂಜೂರಾತಿಗಾಗಿ ಬಿಡಿಎಗೆ ಮೊರೆ ಇಟ್ಟಿತ್ತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಡತಕ್ಕೆ ಸಂಬಂಧಿಸಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೇ ಮುತುವರ್ಜಿ ವಹಿಸಿ ಹೊಸ ರೂಪದಲ್ಲಿ ಪರಿಹಾರ ಒದಗಿಸುವ ರೀತಿಯಲ್ಲಿ ಸೊಸೈಟಿಗೆ ನೆರವಾಗುವಂತೆ ನಿಲುವು ಕೈಗೊಳ್ಳಲಾಗಿತ್ತು. ಈ ಬಗ್ಗೆ ಕೆಲವರು ಸಹಕಾರ ಇಲಾಖೆಯ ಮುಖ್ಯಸ್ಥರಿಗೆ ದೂರು ಸಲ್ಲಿಸಿದ ಬಳಿಕ ಇಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳದಂತೆ ಬಿಡಿಎಗೆ ತಾಕೀತು ಮಾಡಲಾಗಿದೆ.

ಅರ್ಕಾವತಿ ಬಡಾವಣೆಯ ಥಣಿಸಂದ್ರ, ಹೆಣ್ಣೂರು, ಬೈರತಿ ಅಮಾನಿಖಾನೆ, ಗೆದ್ದಲಹಳ್ಳಿ ಗ್ರಾಮಗಳಿಗೆ ಸೇರಿದ 78 ಎಕರೆ ಜಮೀನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಆದರೆ, ಗೃಹ ನಿರ್ಮಾಣ ಸಂಘವು ಈ ಜಮೀನಿಗೆ ಪರಿಹಾರ ರೂಪದಲ್ಲಿ ಸೈಟ್‌ಗಳನ್ನು ಮಂಜೂರಾತಿ ನೀಡುವಂತೆ ಬಿಡಿಎಅನ್ನು ಪದೇ ಪದೆ ಮನವಿ ಮಾಡುತ್ತಲೇ ಬರುತ್ತಿತ್ತು. ಇದಕ್ಕೆ ಪೂರಕ ದಾಖಲೆಗಳನ್ನು ನೀಡುವ ಭರದಲ್ಲಿ ಕೆಲವೊಂದು ನಕಲಿ ದಾಖಲೆಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರಾಧಿಕಾರದ ಕೆಲ ಅಧಿಕಾರಿಗಳು ಷಾಮೀಲಾಗಿದ್ದು, ಸೊಸೈಟಿಗೆ ನೆರವಾಗುತ್ತಿದ್ದಾರೆಂಬ ದೂರು ಸಹಕಾರ ನಿಬಂಧಕರಿಗೆ ನೀಡಲಾಗಿತ್ತು.

ಹೀಗಾಗಿ ಈ ಪ್ರಕರಣದಲ್ಲಿ ಪರಿಹಾರದ ಸೈಟ್‌ಗಳನ್ನು ಹಂಚಿಕೆ ಅಥವಾ ಮಂಜೂರಾತಿ ನೀಡಬಾರದೆಂದು ಬಿಡಿಎ ಆಯುಕ್ತರಿಗೆ ಸೂಚಿಸಿ ಸಹಕಾರ ನಿಬಂಧಕರು ಪತ್ರ ಬರೆದಿದ್ದಾರೆ.

ಮಂಜೂರಾತಿ ಮಾಡದಂತೆ ಡಿಸಿಎಂ ತಾಕೀತು:

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ಪ್ರಾಧಿಕಾರದ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಯಾವುದೇ ಕಾರಣಕ್ಕೂ ಸಂಬಂಧಿಸಿದ ಗೃಹ ನಿರ್ಮಾಣ ಸಂಘಕ್ಕೆ ಪರಿಹಾರದ ಸೈಟ್​​ಗಳನ್ನು ಹಂಚಿಕೆ ಅಥವಾ ಮಂಜೂರಾತಿ ಮಾಡದಂತೆ ಬಿಡಿಎ ಆಯುಕ್ತರಿಗೆ ಮೌಖಿಕ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net