

ದೇವರಹಿಪ್ಪರಗಿ: ಪಟ್ಟಣದಿಂದ ಬಮ್ಮನಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಚಕ್ಕಡಿ ರಸ್ತೆಗಳಲ್ಲಿನ ಮುಳ್ಳು ಗಿಡಗಂಟಿಗಳನ್ನು ತೆರವುಗೊಳಿಸಿ, ಟ್ರಾೃಕ್ಟರ್ ಹಾದುಹೋಗಲು ರಸ್ತೆ ಸುಧಾರಣೆಗೊಳಿಸುವಂತೆ ಆಗ್ರಹಿಸಿ ರೈತರು ಹಾಗೂ ಮಹಿಳೆಯರು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ರೈತಸಂಘ- ಹಸಿರುಸೇನೆ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ರೈತರ ಸಮಸ್ಯೆಗಳಿಗೆ ತಾಲೂಕು ಆಡಳಿತವೇ ಪರಿಹಾರ ಒದಗಿಸಬೇಕು. ಬಮ್ಮನಳ್ಳಿ ರಸ್ತೆ, ಕನ್ನೋಳ್ಳಿ, ಯರನಾಳ, ಇಂಗಳಗಿ, ಹರನಾಳ, ಮುಳಸಾವಳಗಿ, ಮಾರ್ಕಬ್ಬಿನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎತ್ತಿನಗಾಡಿ (ಚಕ್ಕಡಿ) ರಸ್ತೆಗಳಲ್ಲಿಯ ಎಡಬಲಗಳಲ್ಲಿ ಬೆಳೆದಿರುವ ಮುಳ್ಳು ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದರು.
ಮಳೆಯಿಂದ ಬಿದ್ದಿರುವ ಕೊರೆಗಳನ್ನು ಗರಸುನಿಂದ ದುರಸ್ತಿಗೊಳಿಸಿ ಅಗತ್ಯವಾದ ಕಡೆಗಳಲ್ಲಿ ಪೈಪ್ ಅಳವಡಿಸುವುದರ ಮೂಲಕ ನೀರು ಹಾದುಹೋಗಲು ವ್ಯವಸ್ಥೆ ಮಾಡಬೇಕು. ರಾಶಿ ಹಾಗೂ ಸಲು ತರಲು ಟ್ರಾೃಕ್ಟರ್‌ಗಳು ಸಂಚರಿಸಲು ಅನುಕೂಲವಾಗುವಂತೆ ಗ್ರಾಮೀಣ ಚಕ್ಕಡಿ ರಸ್ತೆಗಳನ್ನು ಸಜ್ಜುಗೊಳಿಸಬೇಕು. ಅದಕ್ಕಾಗಿ ಕೂಡಲೇ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ರಾಮು ದೇಸಾಯಿ, ಮಹಿಳಾ ಘಟಕದ ಅಧ್ಯಕ್ಷೆ ಶಕೀರಾ ಹೆಬ್ಬಾಳ, ಉಪಾಧ್ಯಕ್ಷೆ ಸುನಂದಾ ಸೊನ್ನಳ್ಳಿ, ಎಸ್.ಬಿ.ಬಿರಾದಾರ, ಬಸವರಾಜ ಕುಂಬಾರ, ಶಿವಪ್ಪ ಮೆಟಗಾರ, ಭೀಮರಾಯ ಕುಂಬಾರ, ಪ್ರಕಾಶ ವಗ್ಗರ, ಸಾಯಬ್ಬಿ ತಾಂಬೋಳಿ, ಕಸ್ತೂರಿಬಾಯಿ ದೊಡಮನಿ (ಹಿಟ್ನಳ್ಳಿ), ಸಂಗು ಮಸಬಿನಾಳ, ಎಸ್.ಆರ್.ಪಾಟೀಲ ಇದ್ದರು.