8 ಗ್ರಾಮಗಳ ಭೂದಾಖಲೆ ತಮಿಳುನಾಡಿನಲ್ಲಿ!

Published on

ಕಂದಾಯ ಸೇವೆಗಳಿಗಾಗಿ ಚೆನ್ನೈಗೆ ತೆರಳಬೇಕಾದ ಅನಿವಾರ್ಯತೆ | ಭಾಷಾವಾರು ಪ್ರಾಂತ್ಯ ವಿಂಗಡಣೆಯಾದರೂ ಇಲ್ಲ ದಾಖಲೆ ವರ್ಗಾವಣೆ

 ಆನೇಕಲ್ : ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ 68 ವರ್ಷಗಳು ಕಳೆದರೂ ಭೂದಾಖಲೆಗಳಿಗಾಗಿ ಇಂದಿಗೂ ತಮಿಳುನಾಡಿನ ಕಂದಾಯ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿಯ 8 ಗ್ರಾಮಗಳ ನಿವಾಸಿಗಳದ್ದಾಗಿದೆ!.

ಹೌದು..ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸೂರು, ಮಡಿವಾಳ, ಮರಸೂರು ಅಗ್ರಹಾರ, ಬಂಡಾಪುರ, ಶೆಟ್ಟಿಹಳ್ಳಿ, ಆಡೇಸೊಣ್ಣಹಟ್ಟಿ, ಹಳೇವೂರು, ನಾಗನಾಯಕನಹಳ್ಳಿ ಗ್ರಾಮಗಳ ರೈತರು ಕಂದಾಯ ದಾಖಲೆಗಳಿಗಾಗಿ ತಮಿಳುನಾಡಿನ ಚೆನ್ನೈಗೆ ತೆರಳಬೇಕಿರುವುದು ರಾಜ್ಯ ಮರುನಾಮಕರಣಗೊಂಡು ಸುವರ್ಣ ಸಂಭ್ರಮದಲ್ಲಿದ್ದರೂ ತಪ್ಪಿಲ್ಲ. ಜಮೀನು ಮಾರಾಟ, ಜಮೀನು ಹಕ್ಕುಪತ್ರ ಸೇರಿ ಮತ್ತಿತರ ಸಂದರ್ಭಗಳಲ್ಲಿ ದಾಖಲೆಗಳು ಕರ್ನಾಟಕ ಸರ್ಕಾರದಿಂದ ಮಾನ್ಯಗೊಳ್ಳುತ್ತಿಲ್ಲ. ಹಾಗಾಗಿ ದಾಖಲೆಗಳನ್ನು ತಮಿಳುನಾಡಿನಿಂದಲೇ ತರಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಇದೆ.

ಜಮೀನಿನ ಆಕಾರಬಂದ್, ಕಂದಾಯ ನಕ್ಷೆ ಸೇರಿ ಹಲವು ದಾಖಲೆಗಳಿಗಾಗಿ ತಮಿಳುನಾಡಿಗೆ ಹೋಗಬೇಕು. ರಾಜ್ಯದ ಕಂದಾಯ ಮತ್ತು ಭೂದಾಖಲೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ, ಚೈನ್ನೈನಿಂದ ಮೂಲ ದಾಖಲೆ ತರುವಂತೆ ಹಿಂಬರಹ ನೀಡುತ್ತಾರೆ. ಲ್ಯಾಂಡ್ ಡೆವಲಪರ್‌ಗಳು, ಶ್ರೀಮಂತರು ಚೆನ್ನೈಗೆ ಹೋಗಿ ದಾಖಲೆಗಳನ್ನು ತಂದು ಕಂದಾಯ ದಾಖಲೆಗಳನ್ನು ಪೂರ್ಣಗೊಳಿಸಿಕೊಳ್ಳುತ್ತಾರೆ. ಆದರೆ ಸಣ್ಣ, ಮಧ್ಯಮ ವರ್ಗದ ರೈತರು ಕಂದಾಯ ದಾಖಲೆಗಳಿಗಾಗಿ ತಮಿಳುನಾಡಿನವರೆಗೂ ಹೋಗಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಗ್ರಾಮಗಳು

1956ರಲ್ಲಿ ರಾಜ್ಯ ಪುನರ್ ವಿಂಗಡನೆಗೂ ಮುನ್ನ ಮರಸೂರು ಗ್ರಾಮ ಪಂಚಾಯಿತಿಯ 8 ಗ್ರಾಮಗಳು ಮದ್ರಾಸ್ ಪ್ರಾಂತ್ಯದಲ್ಲಿದ್ದವು. ಭಾಷಾವಾರು ರಾಜ್ಯ ಪುನರ್ ವಿಂಗಡಣೆ ಬಳಿಕ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದವು. ಆದರೆ, ಹಿಂದಿನ ಮೂಲ ದಾಖಲೆಗಳು ತಮಿಳುನಾಡಿನಲ್ಲಿಯೇ ಉಳಿದವು. ಪುನರ್ ವಿಂಗಡನೆಯಾದ ನಂತರ ವ್ಯವಹರಿಸಿರುವ ದಾಖಲೆಗಳು ಮಾತ್ರ ಕರ್ನಾಟಕದಲ್ಲಿ ದೊರೆಯುತ್ತವೆ. ಆದರೆ, ಸದರಿ ಗ್ರಾಮಗಳ ಶೇ.90ರಷ್ಟು ಭೂದಾಖಲೆಗಳು ತಮಿಳುನಾಡಿನಲ್ಲಿಯೇ ಉಳಿದಿವೆ.

ತಮಿಳುನಾಡಿಗಾದರೂ ಸೇರಿಸಿ ಬಿಡಿ!

ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿನ ರೈತರು ಚೈನ್ನೈನಿಂದ ಭೂದಾಖಲೆಗಳನ್ನು ತರದಿದ್ದರೆ ಕರ್ನಾಟಕ ಕಂದಾಯ ನಿಯಮದಂತೆ ಜಮೀನು ಮಾರಾಟ, ಹಕ್ಕು ವರ್ಗಾವಣೆ ಸೇರಿ ಕಾನೂನು ರೀತ್ಯ ವ್ಯವಹರಿಸಲು ಸಾಧ್ಯವಿಲ್ಲ. ಈಗಲೂ ಜಮೀನು ನಕ್ಷೆಯಲ್ಲಿ ಮಾಲೀಕರ ಹೆಸರು ಮಾತ್ರ ಕನ್ನಡದಲ್ಲಿ ಬಂದರೆ, ಉಳಿದ ಎಲ್ಲ ಅಕ್ಷರಗಳು ತಮಿಳು ಮತ್ತು ತೆಲುಗು ಭಾಷೆಯಲ್ಲಿರುತ್ತವೆ. ಗ್ರಾಮಸಭೆಗಳಲ್ಲಿ ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಭೂದಾಖಲೆಗಳ ಆಯುಕ್ತರು, ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಏನೂ ಬದಲಾವಣೆಯಾಗಿಲ್ಲ. ಕೆಲವೊಮ್ಮೆ ತಮಿಳುನಾಡಿಗಾದರೂ ಸೇರಿಸಿಬಿಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದೇವೆ ಎಂದು ಮರಸೂರು ಗ್ರಾಮದ ಮುಖಂಡ ಶ್ರೀನಿವಾಸರೆಡ್ಡಿ ಅಳಲು ತೋಡಿಕೊಂಡರು.

ಆದೇಶದಲ್ಲೇ ಉಳಿದ ಆಕಾರಬಂದ್ ಪುಸ್ತಕ ಪುನರ್ ರಚನೆ

ಮರಸೂರು ಗ್ರಾಮ ಪಂಚಾಯಿತಿಯ ಆಕಾರಬಂದ್ ಲಭ್ಯವಿಲ್ಲದಿರುವುದರಿಂದ ಈ ಗ್ರಾಮಗಳ ಆಕಾರಬಂದ್ ಪುಸ್ತಕ ಪುನರ್ ರಚನೆ ಮಾಡಲು ಕ್ರಿಯಾಯೋಜನೆ ರೂಪಿಸುವಂತೆ ಭೂದಾಖಲೆಗಳ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಾಖಲೆಗಳ ಪುನರ್ ನಿರ್ಮಾಣಕ್ಕಾಗಿ ಭೂಮಾಪಕರನ್ನು ನೇಮಕ ಮಾಡಲಾಗಿತ್ತು. ಆದರೆ, ಇದು ಆದೇಶದಲ್ಲಿಯೇ ಉಳಿಯಿತು. ಜಾರಿಗೆ ಮಾತ್ರ ಬಂದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲಿ

ಭೂ ದಾಖಲೆಗಳಿಗಾಗಿ ಸಾಮಾನ್ಯ ಜನರು ಪರದಾಡುವುದಕ್ಕಿಂತ ತಮಿಳುನಾಡಿನಿಂದ ಕಂದಾಯ ದಾಖಲೆಗಳನ್ನು ತಂದು, ರಾಜ್ಯದಲ್ಲಿ ಲಭ್ಯವಿರುವ ದಾಖಲೆಗಳನ್ನು ಜೋಡಿಸಿ, ಪಕ್ಕಾ ದಾಖಲೆಗಳನ್ನು ಸೃಷ್ಟಿಸಿದರೆ, 8 ಗ್ರಾಮಗಳ ಜನರಿಗೆ ನೆಮ್ಮದಿ ದೊರೆಯುತ್ತದೆ. ಇತ್ತೀಚೆಗೆ ಮರಸೂರು ಬಂಡಿ ಮಹಾಕಾಳಿ ದೇವಾಲಯದ ಸುಮಾರು 36 ಎಕರೆ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೂಲಕ ಕಂದಾಯ ದಾಖಲೆಗಳನ್ನು ಚೆನ್ನೈನಿಂದ ಪಡೆದು, ಜಮೀನು ಉಳಿಸಿಕೊಳ್ಳುವಲ್ಲಿ ದೇವಾಲಯ ಸಮಿತಿ ಯಶಸ್ವಿಯಾಗಿದೆ. ಇದೇರೀತಿ ಎಲ್ಲ 8 ಗ್ರಾಮಗಳ ದಾಖಲೆಗಳನ್ನು ಪಕ್ಕಾ ಮಾಡಲು ಕರ್ನಾಟಕ ಸರ್ಕಾರವು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂಬುದು ಸ್ಥಳೀಯರ ಒತ್ತಾಸೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net