ಜಮೀನು ನೋಂದಣಿಗೆ ರೈತರ ಪರದಾಟ

dvd formerl protst
ಪ್ರಭಾಕರ
Published on

ದೇವದುರ್ಗ: ಅರಕೇರಾ ತಾಲೂಕು ಘೋಷಿಸಿದ ನಂತರ ಯಾವುದೇ ಪೂರ್ವಸಿದ್ಧತೆ ಇಲ್ಲದೆ ದೇವದುರ್ಗ ತಾಲೂಕಿನ 90 ಕಂದಾಯ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದಾರೆ. ಆದರೆ, ಎರಡು ತಿಂಗಳಿನಿಂದ ಜಮೀನು ನೋಂದಣಿಯಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅರಕೇರಾ ತಾಲೂಕು ರಚಿಸಿದ್ದು ಸ್ವಾಗತಾರ್ಹ. ವಿವಿಧ ಇಲಾಖೆ ಕಚೇರಿಗಳನ್ನು ಆರಂಭ ಮಾಡಿಲ್ಲ. ಕಂದಾಯ ಇಲಾಖೆ ಪೂರ್ಣಪ್ರಮಾಣದಲ್ಲಿ ಶಿಫ್ಟ್ ಆಗಿಲ್ಲ. ಭೂಮಿ ಕೇಂದ್ರ ಸೇರಿ ಸರ್ಕಾರಿ ವೆಬ್‌ಸೈಟ್‌ನಲ್ಲಿ ಹೆಸರು ಸೇರ್ಪಡೆಯಾಗಿಲ್ಲ ಎಂದು ದೂರಿದರು.

ದೇವದುರ್ಗ ತಾಲೂಕಿನಿಂದ 90 ಕಂದಾಯ ಗ್ರಾಮಗಳನ್ನು ಅರಕೇರಾಕ್ಕೆ ಸೇರಿಸಿದ್ದಾರೆ. ಅರಕೇರಾ ಕಂದಾಯ ವೆಬ್‌ಸೈಟ್ ರಚನೆಯಿಲ್ಲದೆ ಈ ಹಳ್ಳಿಗಳ ರೈತರು ಜಮೀನು ನೋಂದಣಿ, ಮಾರಾಟ, ಖರೀದಿ, ಒತ್ತೆ, ಸಾಲ ಪಡೆಯಲು, ಆಸ್ತಿ ಇಬ್ಭಾಗ ಮಾಡಲು ಆಗುತ್ತಿಲ್ಲ. ಎರಡು ತಿಂಗಳಿನಿಂದ ಸಮಸ್ಯೆಯಿದೆ.

ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಮಸ್ಯೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಫೋನ್ ಮಾಡಿದರೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಶಾಸಕಿ ಕರೆಮ್ಮ ನಾಯಕ ಇದ್ದೂ ಇಲ್ಲದಂತಿದ್ದು ಇಂಥ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸಹಾಯಕ ಆಯುಕ್ತರಿಗೆ ಮನವಿ ಮಾಡಿದರೆ ತಿಂಗಳು ಸಮಯ ಹಿಡಿಯಲಿದೆ ಎನ್ನುತ್ತಾರೆ. ರೈತರು ಅಲ್ಲಿಯವರೆಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಇನ್ನೊಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಅರಕೇರಾ ಇಲ್ಲವೆ ದೇವದುರ್ಗ ಕಂದಾಯ ಇಲಾಖೆಯಲ್ಲಿ ನೋಂದಣಿಗೆ ಅವಕಾಶ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ 90 ಹಳ್ಳಿಗಳ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಉಪಾಧ್ಯಕ್ಷ ಬೂದಯ್ಯಸ್ವಾಮಿ, ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ತಿಮ್ಮಣ್ಣ ನಾಯಕ, ಪೀರ್‌ಸಾಬ್, ಹುಸೇನ್ ಬಾಷಾ ಸೋಮನಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net