

ಸವದತ್ತಿ: ಜನ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಮುನವಳ್ಳಿ, ಯರಗಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಗ್ರೇಡ್-2 ತಹಸೀಲ್ದಾರ್ ಎಂ.ಎನ್. ಮಠದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಪ್ರಧಾನಿ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮುನವಳ್ಳಿ, ಯರಗಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಡಿ. ಟೋಪೋಜಿ ಮಾತನಾಡಿ, ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣದಿಂದ ಹಿಂಪಡೆಯಬೇಕು.
ಕರ್ನಾಟಕ ಸರ್ಕಾರವು 1961ರ ಭೂ ಸುಧಾರಣೆ ಕಾಯ್ದೆಯ 79ಎ, ಬಿ.ಸಿ. ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿ 63ನೇ ಕಲಂಗೆ ತಿದ್ದುಪಡಿ ತಂದಿದೆ. ಇದರಿಂದಾಗಿ 5 ಜನ ಸದಸ್ಯರಿರುವ ಒಂದು ಕೃಷಿ ಕುಟುಂಬ 40 ಯುನಿಟ್‌ಗಳು ಅಂದರೆ 216 ಎಕರೆ ಖುಷ್ಕಿ ಭೂಮಿ ಹೊಂದಲು ಅವಕಾಶ ಮಾಡಿಕೊಟ್ಟಿದೆ. ಕೃಷಿಯೇತರ ಮೂಲಗಳಿಂದ 25 ಲಕ್ಷ ರೂ.ಗಿಂತಲೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಸಹ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಕೃಷಿಕರಲ್ಲದವರು, ಶಿಕ್ಷಣ ಸಂಸ್ಥೆಗಳು, ಟ್ರಸ್ಟ್‌ಗಳು, ಸೊಸೈಟಿಗಳು, ಮಠ-ಮಾನ್ಯಗಳು, ಕೃಷಿ ಭೂಮಿಯನ್ನು ಯಾವುದೇ ನಿರ್ಬ ಂಧವಿಲ್ಲದೆ ಖರೀದಿಸಬಹುದಾಗಿದೆ. ಇದರಿಂದ ಬಡವರ ಕೃಷಿ ಭೂಮಿ ಶ್ರೀಮಂತರ ಪಾಲಾಗುವ ಸಂಭವವಿದೆ. ರಿಯಲ್ ಎಸ್ಟೇಟ್ ಉದ್ಯಮ ಹಳ್ಳಿಗಳನ್ನು ಪ್ರವೇಶಿಸಲು ಹಾಗೂ ಜಮೀನ್ದಾರಿ ಪದ್ಧತಿ ಮರು ಜಾರಿಗೆ ಬರಲು ಸರ್ಕಾರವೇ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಆರೋಪಿಸಿದರು.
ಸವದತ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲು ಜಕಾತಿ, ಪಂಚನಗೌಡ ದ್ಯಾಮನಗೌಡರ, ಫಕೀರಪ್ಪಾ ಹದ್ದಣ್ಣವರ, ಗಂಗಯ್ಯ ಅಮೋಘಿಮಠ, ಬಸವರಾಜ ಗುರಣ್ಣವರ, ಬಸು ಪೂಜೇರ, ಬಿ.ಎನ್. ಪ್ರಭುನವರ, ಮಹಾರಾಜಗೌಡ ಪಾಟೀಲ, ಸಿದ್ದಪ್ಪ ಗೊರವನಕೊಳ್ಳ ಇತರರು ಇದ್ದರು.