

ರಾಯಚೂರು: ಸಣ್ಣ ರೈತರಿಗೆ ಮಾರಕವಾಗಲಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕರ್ನಾಟಕ ಜಾಗೃತ ರೈತ ಸಂಘ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಬಳಿ ಕಾಯ್ದೆ ತಿದ್ದುಪಡಿಯ ವಿರೋಧಿಸಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ಪ್ರಭಾವತಿಗೆ ಬುಧವಾರ ಮನವಿ ಸಲ್ಲಿಸಿದರು. ತಿದ್ದುಪಡಿ ನೀತಿಯಿಂದಾಗಿ ಜಾಗತೀಕ ಮತ್ತು ಕಾರ್ಪೋರೇಟ್ ಹಣಕಾಸು ಬಂಡವಾಳದ ಹಿತಾಸಕ್ತಿಗೆ ಸರ್ಕಾರ ಮಣೆ ಹಾಕಿದೆ ಎಂದು ದೂರಿದರು.
ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸುವುದರಿಂದ ರೈತರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಲಿದೆ. ಕಾಯ್ದೆ ಜಾರಿಯಾಗಿ 45 ವರ್ಷ ಗತಿಸಿದರೂ, ಸಮಗ್ರ ಜಾರಿಯ ಕನಸು ನನಸಾಗಿಯೇ ಉಳಿದಿದೆ. 30 ವರ್ಷಕ್ಕೂ ಮೇಲ್ಪಟ್ಟ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಈವರೆಗೂ ಸರಿಯಾಗಿ ಪಟ್ಟ ಸಿಕ್ಕಿಲ್ಲ ಎಂದು ದೂರಿದರು. ಆಹಾರ ಭದ್ರತೆಯ ಬಿಕ್ಕಟಿನೊಂದಿಗೆ ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಸಮಿತಿ ಜಿಲ್ಲಾಧ್ಯಕ್ಷ ಅಬ್ರಾಹಂ ಪನ್ನೂರು, ಪದಾಧಿಕಾರಿಗಳಾದ ಬಿ.ಬಸವಲಿಂಗಪ್ಪ , ಜಯಪ್ರಕಾಶಗೌಡ, ಶ್ರೀನಿವಾಸ ಕೊಪ್ಪರ್ ಸೇರಿ ಇತರರಿದ್ದರು.