

ಚನ್ನಮ್ಮನ ಕಿತ್ತೂರು: ತಾಲೂಕ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಸೀಲ್ದಾರರ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಸೇರಬೇಕಿದ್ದ ಜಮೀನು ಖಾಸಗಿಯವರ ಪಾಲಾಗಿದ್ದು, ಆ ಜಮೀನನ್ನು ಮಾರಾಟ ಮಾಡಲಾಗಿದೆ ಎಂದು ತಾಲೂಕಿನ ಹೊನ್ನಾಪುರ ಗ್ರಾಮಸ್ಥರು ಆರೋಪಿಸಿ ತಾಪಂ ಇಒ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಹಿಂದೆ ರಾಜ್ಯಪಾಲರ ಹೆಸರಿನಲ್ಲಿ 32,500 ರೂ. ವೆಚ್ಚದಲ್ಲಿ ವಸತಿ ಯೋಜನೆಗಾಗಿ ಈರಣ್ಣ ದೊಡಮನಿ ಎಂಬುವರಿಂದ 1.20 ಎಕರೆ ಭೂಮಿ ಖರೀದಿಸಲಾಗಿತ್ತು. ರಾಜ್ಯಪಾಲರ ಪರವಾಗಿ ಬೈಲಹೊಂಗಲದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಮೀನು ಖರೀದಿಸಿದ್ದರು. ಆದರೆ, ಇಒ ಹಾಗೂ ತಹಸೀಲ್ದಾರರ ನಿರ್ಲಕ್ಷ್ಯದಿಂದ ಖರೀದಿಯಾದ ಭೂಮಿ ಇನ್ನೂವರೆಗೆ ದಾಖಲೆ ಪುಸ್ತಕದಲ್ಲಿ ನೋಂದಣಿ ಮಾಡದಿರುವ ಪರಿಣಾಮ ಈಗ ಸರ್ಕಾರಕ್ಕೆ ಮಾರಾಟ ಮಾಡಿದ ಖಾಸಗಿ ವ್ಯಕ್ತಿಯೇ ತಮ್ಮ ಸಂಬಂಧಿಕರಿಗೆ 2023ರಲ್ಲಿ ಮಾರಾಟ ಮಾಡಿದ್ದಾರೆ. ಅಲ್ಲದೆ ಆ ಭೂಮಿಯಲ್ಲಿ ಕಷಿ ಚಟುವಟಿಕೆಯನ್ನೂ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಆ ಭೂಮಿಯನ್ನು ವಸತಿ ಯೋಜನೆಗಾಗಿ ಬಳಸಿಕೊಳ್ಳಬೇಕು ಹಾಗೂ ಸರ್ಕಾರದ ಹೆಸರನ್ನು ನೋಂದಣಿ ಮಾಡಬೇಕು ಹಾಗೂ 1995ರ ನಿವೇಶನ ಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು. ಮುಖಂಡರಾದ ಬಸವರಾಜ ದೊಡಮನಿ, ಶಿವಪ್ಪ ದೊಡಮನಿ, ಸಂತೋಷ ಮಾವಿನಕೊಪ್ಪ, ಶಿವಾಜಿ ಪವಾರ, ಸಂಗವ್ವ ಅರಳಿಮರದ, ಅಜ್ಜಪ್ಪ ತುರಾಯಿ ಇತರರು ಇದ್ದರು.