

ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟಿರುವುದಾಗಿ ಒಂದು ತಿಂಗಳ ಹಿಂದಷ್ಟೇ ಘೋಷಿಸಿದ್ದ ಸರ್ಕಾರ ಈಗ ರೈತರಿಗೆ ನೋಟಿಸ್ ನೀಡಿ ಸೆ.6ರಂದು ಬೆಂಗಳೂರಿನ ಅರವಿಂದ ಭವನದಲ್ಲಿ ಬೆಲೆ ನಿಗದಿ ಸಭೆ ಕರೆದಿದೆ. ಆದರೆ, ಅಂದು ಯಾವುದೇ ಕಾರಣಕ್ಕೂ ಸಭೆ ನಡೆಸಲು ಬಿಡುವುದಿಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೂಸ್ವಾಧೀನ ವಿರೋಧಿ ರೈತರ ಸಭೆಯ ಬಳಿಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅನಿಲ್ ಎಂ. ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿ ಮಾತನಾಡಿದ ಅವರು,
ರೈತರ ದಿಕ್ಕು ತಪ್ಪಿಸುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡಲಾಗುವುದು ಎಂದರು.
ಸ್ವಾತಂತ್ರ್ಯ ದಿನದಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿ ಚನ್ನರಾಯಪಟ್ಟಣ 13 ಹಳ್ಳಿಗಳ 1777 ಎಕರೆ ಭೂಸ್ವಾಧಿನ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ೋಷಿಸಿದ್ದರು. ಆದರೆ, ಈಗ ಹೋಬಳಿ ವ್ಯಾಪ್ತಿಯ ಹ್ಯಾಡಾಳ, ಗೋಕರೆ ಬಚ್ಚಳ್ಳಿ ಸರ್ವೇ ನಂಬರಿನ 439 ಎಕರೆ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರು ಸಹಿ ಮಾಡಿ ಒಪ್ಪಿಗೆ ನೀಡದೇ ಇದ್ದರೂ ಸೆ.6ರಂದು ಬೆಲೆ ನಿಗದಿ ಸಭೆಯ ನೋಟಿಸ್ ನೀಡಲಾಗಿದೆ. ನಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡುತ್ತೇವೆ, ಭೂಮಿ ಬಿಡುವುದಿಲ್ಲ, ದರ ನಿಗದಿ ಸಭೆ ದಿನ ಅರವಿಂದ ಭವನಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.
ಮುನಿಯಪ್ಪನವರೇ ಏಕೆ ಸುಮ್ಮನಿದ್ದೀರಿ?ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಭೂಸ್ವಾಧೀನ ರದ್ದುಪಡಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ೋಷಿಸಿದ್ದರೂ, ಅದೇ ಉಲ್ಲೇಖ ಸಂಖ್ಯೆಯಲ್ಲಿ 439 ಎಕರೆ ಭೂಮಿಯ ರೈತರಿಗೆ ನೋಟಿಸ್ ಕೊಟ್ಟಿರುವುದು ಆಘಾತಾಕಾರಿ ಎಂದು ಪ್ರಾಂತ ರೈತ ಸಂಘದ ಪ್ರಧಾನಕಾರ್ಯದರ್ಶಿ ಪಿ.ಯಶವಂತ ಹೇಳಿದರು.ರೈತರು ಹುತಾತ್ಮರಾದರೂ ಸರಿ, ಪೋಲಿಸ್, ಮಿಲಿಟರಿ ಪ್ರಯೋಗ ಮಾಡಿದರೂ ರೈತರ ಹೋರಾಟ ನಿಲ್ಲದು.ಜಿಲ್ಲಾ ಮಂತ್ರಿ ಕೆ.ಎಚ್.ಮುನಿಯಪ್ಪನವರೇ ಏಕೆ ಸುಮ್ಮನಿದ್ದೀರಿ...ನೀವು ಕೊಟ್ಟ ಮಾತು ಏನಾಯಿತು?....ಈ ಕೂಡಲೇ ಭೂ ಸ್ವಾಧಿನ ಪ್ರಕ್ರಿಯೆ ಕೈಬಿಟ್ಟ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಈ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು.