ಜಮೀನು ಸಿದ್ಧತೆಯಲ್ಲಿ ರೈತರು ಬ್ಯುಸಿ - ಮುಂಗಾರು ನಿರೀಕ್ಷೆಯಲ್ಲಿ ಅನ್ನದಾತರು

Yalaburga Sowing Prepation farmers
ಯಲಬುರ್ಗಾ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಜಮೀನು ಸಿದ್ಧಪಡಿಸುತ್ತಿರುವ ರೈತ.
Published on

ಯಲಬುರ್ಗಾ: ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಲ್ಲಿ ತಾಲೂಕಿನ ಅನ್ನದಾತರು ಬಿತ್ತನೆಗಾಗಿ ಜಮೀನು ಸಿದ್ಧಪಡಿಸುವಲ್ಲಿ ನಿರತರಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು, ಸೂರ್ಯಕಾಂತಿ, ಹೈಬ್ರೀಡ್ ಜೋಳದ ಬೀಜಗಳ ಬಿತ್ತನೆಯಾಗಲಿದ್ದು, ಒಣಬೇಸಾಯ ಹಾಗೂ ಮಳೆಯಾಶ್ರಿತ ಪ್ರದೇಶದ ರೈತರು ಮಳೆ ಆಗಮನಕ್ಕೆ ಕಾಯುತ್ತಿದ್ದಾರೆ.

ಕೆಲವೆಡೆ ಬಿತ್ತನೆಯಾಗಿದೆ ಎಳ್ಳು

ಏಪ್ರಿಲ್ ಕೊನೇ, ಮೇ ತಿಂಗಳ ಆರಂಭದಲ್ಲಿ ತಾಲೂಕಿನ ನಾನಾ ಕಡೆ ಅಸಲಿ ಮಳೆ ಉತ್ತಮವಾಗಿ ಸುರಿದ ಕಾರಣ ಮಸಾರಿ ಭಾಗದ ಗಾಣಧಾಳ, ಚಿಕ್ಕಮನ್ನಾಪುರ, ಹಿರೇವಡ್ರಕಲ್, ಕಟಗಿಹಳ್ಳಿ, ತಾಳಕೇರಿ, ಬೋದೂರು ಭಾಗದ ರೈತರು ಎಳ್ಳು ಬಿತ್ತನೆ ಮಾಡಿದ್ದಾರೆ. ಬಳಿಕ ಮಳೆ ಕೈಕೊಟ್ಟಿದ್ದರಿಂದ ಅತಿಯಾದ ಬಿಸಿಲಿನ ಪರಿಣಾಮ ಬೆಳೆ ಬಾಡಲಾರಂಭಿಸಿವೆ.

3,691 ಕ್ವಿಂಟಾಲ್ ಬೀಜ ಮಾರಾಟ

ಕಳೆದ ಸಲ ಮುಂಗಾರು ಹಂಗಾಮಿನಲ್ಲಿ ಯಲಬುಗಾೀ-ಕುಕನೂರು ತಾಲೂಕಿನಲ್ಲಿ 227 ಕ್ವಿಂಟಾಲ್ ಹೆಸರು, 175 ಕ್ವಿ. ಸಜ್ಜೆ, 3099 ಕ್ವಿ. ಮೆಕ್ಕೆಜೋಳ, 109 ಕ್ವಿ. ಸೂರ್ಯಕಾಂತಿ, ತೊಗರಿ 78 ಕ್ವಿ. ಸೇರಿ ಒಟ್ಟು 3,691 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟವಾಗಿತ್ತು.

ಎರಡು ಹೆಚ್ಚುವರಿ ಕೇಂದ್ರ

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಯಲಬುರ್ಗಾ, ಕುಕನೂರು, ಮಂಗಳೂರು ಮತ್ತು ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರ ಸೇರಿ ಬೇವೂರು, ಗುನ್ನಾಳ ಗ್ರಾಮದಲ್ಲಿ ಹೆಚ್ಚುವರಿಯಾಗಿ ಎರಡು ಕಡೆ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ. ಕೇಂದ್ರಗಳಲ್ಲಿ ಅಗತ್ಯ ಬೀಜ ದಾಸ್ತಾನು ಮಾಡಲು ಕೃಷಿ ಇಲಾಖೆ ತಯಾರಿ ನಡೆಸಿದೆ. ಒಟ್ಟು 3,803 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜ ಬೇಡಿಕೆ ಸಲ್ಲಿಸಲಾಗಿದ್ದು, 17,100 ಮೆಟ್ರಿಕ್ ಟನ್ ನಾನಾ ವಿಧದ ರಾಸಾಯನಿಕ ಗೊಬ್ಬರದ ಅವಶ್ಯವಿದೆ.

ಎರಡೂ ತಾಲೂಕಿನಲ್ಲಿ ಒಟ್ಟು 85,630 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದ್ದು ಅದರಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಮಳೆಯಾಶ್ರಿತ 68,198 ಹೆಕ್ಟೇರ್ ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯವಿರುವ ಬಿತ್ತನೆ ಬೀಜಗಳ ದಾಸ್ತಾನು ಮಾಡಲು ತಯಾರಿ ನಡೆಸಲಾಗಿದೆ. ಇನ್ನೂ ಎರಡ್ಮೂರು ದಿನದಲ್ಲಿ ಬೀಜಗಳು ಬರಲಿವೆ. ಮೇ 25ರ ನಂತರ ಬೀಜ ವಿತರಣೆ ಮಾಡಲಾಗುತ್ತದೆ. ರೈತರು ಮಳೆಯ ಹದ ನೋಡಿಕೊಂಡು ಬಿತ್ತನೆ ಮಾಡಬೇಕು. ಬೀಜೋಪಚಾರ ಕಡ್ಡಾಯ.| ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net