ಚೊಕ್ಕನಹಳ್ಳಿಯಲ್ಲಿರುವ ಸರ್ಕಾರಿ ಜಮೀನು ಅಕ್ರಮ ಪರಭಾರೆ

krishna byregowda
Published on

ಬೆಂಗಳೂರು: ಯಲಹಂಕ ಸಮೀಪದ ಚೊಕ್ಕನಹಳ್ಳಿಯಲ್ಲಿರುವ 21.19 ಎಕರೆ ಸರ್ಕಾರಿ ಭೂಮಿಯನ್ನು ಬೋಗಸ್ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವುದು ಸಾಬೀತಾಗಿದ್ದು, ಭೂಮಿ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಕೃಷ್ಣಬೈರೇಗೌಡ ಮಾತನಾಡಿ, ಖಾಸಗಿ ವ್ಯಕ್ತಿಯೊಬ್ಬರು ಈ ಜಮೀನಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ. ನಂತರ ಮತ್ತೊಬ್ಬರಿಗೆ ಮಾರಾಟ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು. ಆಗ ಮಧ್ಯಪ್ರವೇಶಿಸಿದ ಅಶೋಕ್, ಈ ಸ್ಪಷ್ಟನೆ ನೀಡಿದರು.

ನಕಲಿ ದಾಖಲೆಗಳ ಆಧಾರದ ಮೇಲೆ ರಿಜಿಸ್ಟರ್ ಮಾಡಿಕೊಟ್ಟಿರುವ ಸಬ್​ರಿಜಿಸ್ಟ್ರಾರ್ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಅಧಿಕಾರಿಯನ್ನು ಅಮಾನತು ಮಾಡಿದರೆ ಒಂದೇ ವಾರದಲ್ಲಿ ಅಮಾನತು ರದ್ದು ಮಾಡಿಸಿಕೊಂಡು ಬಂದರು. ವರ್ಗಾವಣೆ ಮಾಡಿದರೆ ನ್ಯಾಯಾಲಯದ ಮೂಲಕ ರದ್ದು ಮಾಡಿಸಿಕೊಂಡರು. ಕೊನೆಗೆ ನಿಯೋಜನೆ ಮಾಡಿ ಕಳುಹಿಸಿದರೂ ರದ್ದು ಮಾಡಿಸಿಕೊಂಡರು. ನ್ಯಾಯಾಲಯಗಳ ಮಧ್ಯಪ್ರವೇಶದಿಂದ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನಸೌಧದ ದಾಖಲೆಗಳಲ್ಲಿ ಸರ್ಕಾರಿ ಎಂದು ಉಲ್ಲೇಖವಾಗಿದೆಯಾ ಗಮನಿಸಿ, ಇಲ್ಲವಾದರೆ ಬೇರೆ ಯಾರಾದರೂ ವಿಧಾನಸೌಧವನ್ನೇ ಯಾರಿಗಾದರೂ ಮಾರಾಟ ಮಾಡಿ ನೋಂದಣಿ ಮಾಡಿಕೊಡುತ್ತಾರೆ ಎಂದು ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಉಪ ಮುಖ್ಯಮಂತ್ರಿ ಆರ್. ಅಶೋಕ್!

ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ತಮ್ಮ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಕೃಷ್ಣಬೈರೇಗೌಡ ಬಾಯಿತಪ್ಪಿ ಹೇಳಿದರು. ಆಗ ಸ್ಪೀಕರ್, ಅಶೋಕ್ ಯಾವಾಗ ಉಪಮುಖ್ಯಮಂತ್ರಿ ಆದರು ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ಕೊಡುತ್ತ ಅಶೋಕ್​ಗೆ ಪರೋಕ್ಷವಾಗಿ ಕಾಲೆಳೆದ ಕೃಷ್ಣಬೈರೇಗೌಡ, ಅಶೋಕ್ ಉಪಮುಖ್ಯಮಂತ್ರಿ ಆಗಿದ್ದವರು. ಮತ್ತೊಮ್ಮೆ ಉಪಮುಖ್ಯಮಂತ್ರಿ ಆಗಲಿ ಎನ್ನುವುದು ನಮ್ಮ ಆಶಯ. ಅಶೋಕ್ ನಮ್ಮ ಬೀಗರೂ ಹೌದು. ಅವರ ಮಗನಿಗೆ ನಮ್ಮ ಹುಡುಗಿಯನ್ನೇ ಮದುವೆ ಮಾಡಿಕೊಟ್ಟಿದ್ದೇವೆ. ಅವರ ಸಹೋದರ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು ಎಂಬುದು ಬೇರೆ ವಿಚಾರ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net