

ತಿ.ನರಸೀಪುರ: ಸಂಗೀತ ರತ್ನ ಪಿಟೀಲು ಟಿ.ಚೌಡಯ್ಯ ಸ್ಮಾರಕಕ್ಕೆ ಸೇರಿದ ಜಾಗವನ್ನು ಪುರಸಭೆ ಮುಖ್ಯಾಧಿಕಾರಿ ರಾಜಕೀಯ ಪ್ರಭಾವಕ್ಕೆ ಮಣಿದು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಆರೋಪಿಸಿದರು.
ಪಟ್ಟಣದ ಬೈರಾಪುರ ಸರ್ವೇ ನಂ.58ರ 1.02 ಎಕರೆ ನಿವೇಶನದ ಪೈಕಿ 12 ಗುಂಟೆ ಜಮೀನನ್ನು 1972ರಲ್ಲಿ ಟಿ.ಚೌಡಯ್ಯ ಮೆಮೋರಿಯಲ್ ಗಾಯನ ಸಮಾಜಕ್ಕೆ ಸರ್ಕಾರ ಮಂಜೂರು ಮಾಡಿದ್ದು, ಆರ್‌ಟಿಸಿ ಮತ್ತು ಎಂಆರ್‌ನಲ್ಲಿ ಯಥಾವತ್ ನಮೂದಾಗಿದೆ. ಅಲ್ಲದೆ 2002ರಲ್ಲಿಯೂ ಖಾತೆ ಹಾಗೆಯೇ ಮುಂದುವರಿದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿಗೆ ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ಅವರು ಸರ್ವೇ ನಂಬರ್‌ನಲ್ಲಿದ್ದ ಜಮೀನನ್ನು ಕೆಎಂಎಫ್‌ನಲ್ಲಿ ಕಾರ್ಯದರ್ಶಿಗಳು, ಸಂಗೀತ ರತ್ನ ಟಿ.ಚೌಡಯ್ಯ ಸ್ಮಾರಕ ಭವನ ಟ್ರಸ್ಟ್ ಎಂದು ತಿದ್ದುಪಡಿ ಅಂತ ನಮೂದು ಮಾಡಿ ಖಾತೆ ಮಾಡಿಕೊಟ್ಟಿದ್ದಾರೆ. ಖಾತೆ ಮಾಡಿರುವ ಕೆಎಂಎಫ್‌ನಲ್ಲಿ ಡಬ್ಲ್ಯೂ 5461/1999 ಕೋರ್ಟ್ ಆದೇಶ ಎಂದು ನಮೂದಾಗಿದೆ. ಆದರೆ, ಟಿ.ಚೌಡಯ್ಯ ಸ್ಮಾರಕ ಟ್ರಸ್ಟ್ 2010ರಲ್ಲಿ ನೋಂದಣಿಯಾಗಿದೆ. ಹಾಗಾಗಿ ಟಿ.ಚೌಡಯ್ಯ ಮೆಮೋರಿಯಲ್ ಗಾಯನ ಸಮಾಜಕ್ಕೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಜಾಗವನ್ನು ಆಮಿಷಕ್ಕೆ ಮಣಿದು ಅಕ್ರಮವಾಗಿ ಖಾತೆ ಮಾಡಿರುವ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಖಾತೆ ರದ್ದುಪಡಿಸಬೇಕು. ಇಲ್ಲದಿದ್ದರೆ ಪುರಸಭೆ ಮುಂಭಾಗ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಕನ್ನಹಳ್ಳಿ ಶಿವಕುಮಾರ್, ಜಿಲ್ಲಾ ಸಂಚಾಲಕ ವಾಟಾಳು ನಾಗರಾಜು, ಜಿಲ್ಲಾ ವಿದ್ಯಾರ್ಥಿ ಸಂಘದ ಧಮ್ಮ ಅಶೋಕ, ಕನ್ನಹಳ್ಳಿ ಸೋಮಣ್ಣ, ತಾಲೂಕು ಖಜಾಂಚಿ ಡಣಾಯಕಪುರ ಬಸವಣ್ಣ, ಹಿರಿಯೂರು ಮಹದೇವ ಇತರರು ಇದ್ದರು.