

ಕಿರುವಾರ ಎಸ್. ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಕೈಗಾರಿಕೆಗಳು, ಹೆದ್ದಾರಿಗಳು ನಿರ್ಮಾಣವಾದಂತೆ, ಜಮೀನುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬಂಗಾರ, ಭೂಮಿ ಖರೀದಿ ಮಾಡಿಟ್ಟರೆ ಮುಂದಿನ ದಿನಗಳಲ್ಲಿ ಬಂಡವಾಳವಾಗುತ್ತದೆ ಎಂಬ ಭಾವನೆ ಹೆಚ್ಚಿದ್ದು, ಅಂತೆಯೇ, ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆಯಾಗುತ್ತಿದ್ದರೆ, ಜಿಲ್ಲೆಯಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ.
ಇದರ ನಡುವೆ ಜಿಲ್ಲೆಯಲ್ಲಿ ಭೂಮಿ ಸಿಗದಿದ್ದರೂ ರೈತರನ್ನು ಮನವೊಲಿಸಿ ಜಮೀನು ಖರೀದಿಸುತ್ತಿರುವ ನಡುವೆ ಕೆಲ ರೈತರಿಗೆ ಜಮೀನು ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಕಿರುಕುಳ ನೀಡಿ ಭೂಮಿ ಪಡೆಯಲಾಗುತ್ತಿದೆ ಎನ್ನಲಾಗಿದೆ. ಭೂಮಿ ದಾಹಕ್ಕೆ ಕಾಲುವೆ, ರಸ್ತೆಗಳು ಮಾಯವಾಗುತ್ತಿವೆ.
ಜಿಲ್ಲೆಯ ಮಾಲೂರು, ಕೋಲಾರ ತಾಲೂಕಿನ ನರಸಾಪುರ, ವೇಮಗಲ್ ಭಾಗದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕಡೆಯೆಲ್ಲ ಭೂಮಿಗೆ ಬಂಗಾರದ ಬೆಲೆಯಿದೆ. ಜಿಲ್ಲೆಯ ಮಾಲೂರು ತಾಲೂಕಿನ ಮಡಿವಾಳ ಸಮೀಪ ಬೆಂಗಳೂರಿನ ನಿವಾಸಿಯೊಬ್ಬರು ಸುಮಾರು 29 ಎಕರೆಗೂ ಹೆಚ್ಚು ಜಮೀನು ಖರೀದಿ ಮಾಡಿದ್ದಾರೆ. ಈ ಭಾಗದಲ್ಲಿ ಹಾದು ಹೋಗಿರುವ ಕಾಲುವೆ, ರಸ್ತೆ, ಜಮೀನುಗಳನ್ನು ಸಹ ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ.
ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಜತೆಗೆ ಮಾಲೂರಿನಿಂದ ತಮಿಳುನಾಡು, ಬೆಂಗಳೂರು-ಚೆನ್ನೆ$ ಕಾರಿಡಾರ್ ಮಾಲೂರು ಸಮೀಪ ಹಾದು ಹೋಗಿದ್ದು, ಜಮೀನುಗಳಿಗೆ ಬಂಗಾರದ ಬೆಲೆ ಬಂದಿದೆ. ಬೆಂಗಳೂರು, ಮೈಸೂರು, ತುಮಕೂರು ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಉದ್ಯಮಿದಾರರು ಜಮೀನು ಖರೀದಿ ಮಾಡುತ್ತಿದ್ದಾರೆ.
ಎಕರೆಗೆ 50 ಲಕ್ಷ ರೂ.!: ಈ ಪ್ರದೇಶಗಳಲ್ಲಿ ಮಾರುಕಟ್ಟೆ (ಎಸ್ಆರ್) ದರ ಎಕರೆಗೆ 40 ರಿಂದ 50 ಲಕ್ಷ ರೂ. ಇದ್ದರೆ, ಅದಕ್ಕಿಂತ ನಾಲ್ಕೆ$ದು ಪಟ್ಟು ಹೆಚ್ಚು ಮಾರಾಟ ಮಾಡುತ್ತಾರೆ. ಜಮೀನು ದರವೂ ಎಷ್ಟೇ ಆದರೂ ಪರವಾಗಿಲ್ಲ ಮನಸ್ಸಿಟ್ಟ ಜಮೀನನ್ನು ಖರೀದಿದಾರ ಖರೀದಿಸಿಯೇ ತೀರುತ್ತಾನೆ. ಜಮೀನನ್ನು ಜಿಲ್ಲಾಡಳಿತದಿಂದ ಭೂ ಪರಿವರ್ತನೆ ಮಾಡಿಸಿ ಅದನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರೂ ಇದ್ದಾರೆ.
ಮಧ್ಯೆ ಸಿಲುಕಿದ ಕುಟುಂಬ: ಕೃಷಿ ಭೂಮಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಖರೀದಿ ಮಾಡಿ ಅವುಗಳನ್ನು ವಾಣಿಜ್ಯ, ಕೈಗಾರಿಕೆ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿ ಹೆಚ್ಚಿನ ಬೆಲೆಗೆ ಮಾರುವುದು ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಅಮಾಯಕ ರೈತರು ಹೆಚ್ಚು ಕಿರುಕುಳ ಅನುಭವಿಸುವಂತಾಗಿದೆ. ಇದಕ್ಕೆ ಸಾ ಎಂಬಂತೆ ಮಡಿವಾಳ ಗ್ರಾಮದ ತಿಪ್ಪಣ್ಣ ಅವರ ಜಮೀನಿನ ಸುತ್ತಮುತ್ತ ಬೆಂಗಳೂರಿನ ನಿವಾಸಿಯೊಬ್ಬರು ಜಮೀನು ಖರೀದಿ ಮಾಡಿಕೊಂಡಿದ್ದಾರೆ. ಮಧ್ಯದಲ್ಲಿ ತಿಪ್ಪಣ್ಣ ಅವರ ಜೀತ್ರಾರ್ಜಿತ ಆಸ್ತಿ ಇದ್ದು, ಮಾರಾಟ ಮಾಡಲು ಇಷ್ಟವಿಲ್ಲದೆ ಹಾಗೆ ಉಳಿಸಿಕೊಂಡಿದ್ದಾರೆ. ಜಮೀನಿನಲ್ಲೆ ಹಸು ಸಾಕಣೆ, ವ್ಯವಸಾಯ ಮಾಡುತ್ತಿದ್ದಾರೆ. ಅಲ್ಲೆ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಮಾಲೀಕತ್ವದ ಜಮೀನಿಗೆ ಖರೀದಿದಾರ ಬೇಲಿ ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಧ್ಯದಲ್ಲಿರುವ ಜಾಗಕ್ಕೆ ಹೋಗಿ ಬರಲು ನಕಾಶೆಯಲ್ಲಿ ದಾರಿ ಇದ್ದು, ದಾರಿ ಬಿಟ್ಟುಕೊಡಬೇಕು ಎಂದು ಮಾಲೀಕನನ್ನು ಮನವಿ ಮಾಡಿ, ಕೆಲವರ ಮಧ್ಯಸ್ಥಿಕೆಯಲ್ಲಿ ರಾಜಿ ಸಂದಾನ ಮಾಡಲಾಗಿತ್ತು. ಆಗ ಬಂಡಿ ಜಾಡು ದಾರಿ ಬಿಡುವುದಾಗಿ ಹೇಳಿದ್ದರು. ಜತೆಗೆ ರಸ್ತೆಯನ್ನು ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಭಾನುವಾರ ತಡರಾತ್ರಿ ಬಂದು ಗೋಡೆ ನಿರ್ಮಿಸಿದ್ದು, ಇದರಿಂದ ರೈತ ತಿಪ್ಪಣ್ಣ ಕುಟುಂಬದವರು ಹೊರ ಬರಲು ಆಗದೆ ಪರದಾಡುವಂತಾಗಿದೆ.
ಅನುಕೂಲ ಮಾಡಿಕೊಡಲು ಒತ್ತಾಯ: ಮನೆಗೆ ಹೋಗಿ ಬರಲು ದಾರಿ ಬಿಡಿಸಿಕೊಡುವಂತೆ ರೈತ ತಿಪ್ಪಣ್ಣ, ಮಾಲೂರು ತಹಸೀಲ್ದಾರ್, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಪ್ಪಣ್ಣ ಅವರ ಮಗ ಚಂದನ್ ಅಳಲು ತೋಡಿಕೊಂಡಿದ್ದಾರೆ. ಮನೆಯಲ್ಲೇ ಇದ್ದೆವು, ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಲು ಮನೆಯಿಂದ ಹೊರಗೆ ಬಂದಾಗ ರಸ್ತೆ ಬಂದ್ ಮಾಡಿದ್ದರು. ಇದನ್ನು ಪ್ರಶ್ನಿಸೋಣ ಎಂದರೆ ಆಗ ಯಾರೂ ಇರಲಿಲ್ಲ. ಸುತ್ತಾಡಿಕೊಂಡು ನೀಲಗಿರಿ ತೋಪಿನಿಂದ ಈಚೆಗೆ ಬರಬೇಕಾಯಿತು. ಅಧಿಕಾರಿಗಳಿಗೆ ದೂರು ನೀಡಿದ್ದು, ಕೂಡಲೇ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಖರೀದಿಸಿರುವ ಜಮೀನು ಸುತ್ತಲೂ ಬೇಲಿ ನಿರ್ಮಿಸಿಕೊಂಡಿದ್ದು, ನಾವು ಜಮೀನು ಮಾರಾಟ ಮಾಡದೆ ಇರುವುದರಿಂದ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. | ಚಂದನ್ ತಿಪ್ಪಣ್ಣ ಮಗ, ಮಡಿವಾಳ ನಕಾಶೆಯಲ್ಲಿ ದಾರಿ ಇದ್ದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ನಕಾಶೆಯಲ್ಲಿ ದಾರಿ ಇಲ್ಲದಿದ್ದರೆ ಕಾಲು ದಾರಿ ಬಿಡಿಸಿಕೊಡಲು ಕ್ರಮವಹಿಸಲಾಗುವುದು. | ರೂಪಾ ತಹಸೀಲ್ದಾರ್, ಮಾಲೂರು