

ಸುಗ್ಗರಾಜು ಜಿ.ಕೆ. ನೆಲಮಂಗಲ
ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ನಗರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮಪಂಚಾಯಿತಿಗಳ ಚರ, ಸ್ಥಿರಾಸ್ತಿ ಸೇರಿ ಎಲ್ಲ ದಾಖಲೆಗಳನ್ನು ನಗರಸಭೆ ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳ ತಂಡ ಮುಂದಾಗಿದೆ.
ಮೊದಲ ಹಂತವಾಗಿ ಪಟ್ಟಣ ಸಮೀಪದ ಕೆಲ ಗ್ರಾಪಂಗಳನ್ನು ಸೇರ್ಪಡೆ ಮಾಡಿಕೊಂಡು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ 2019 ಡಿ.26ರಂದು ಹೊರಡಿಸಿರುವ ರಾಜ್ಯಪತ್ರದಂತೆ ದಾಖಲೆಗಳನ್ನು ಹಸ್ತಾಂತರಿಸುವಂತೆ ಬುಧವಾರ ಮಧ್ಯಾಹ್ನ ಪೌರಾಯುಕ್ತ ಆರ್.ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ವಾಜರಹಳ್ಳಿ ಗ್ರಾಪಂ ಕಚೇರಿಗೆ ಭೇಟಿ ನೀಡಿದ್ದು, ಗ್ರಾಪಂ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದಾರೆ.
ಕಾಲಾವಕಾಶ ನೀಡುವಂತೆ ಮನವಿ: ಗ್ರಾಪಂ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿಲ್ಲದಿರುವುದು ಒಂದೆಡೆಯಾದರೆ ಗ್ರಾಪಂ ವ್ಯಾಪ್ತಿಯ ಪೂರ್ಣಗೊಂಡ ಕಾಮಗಾರಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇರುವುದು, ಸಾರ್ವಜನಿಕರ ಇ-ಸ್ವತ್ತು ಆಸ್ತಿ ಅರ್ಜಿಗಳ ವಿಲೇವಾರಿಗೆ ತೊಂದರೆ ಆಗಲಿದ್ದು, ದಾಖಲೆಗಳ ಹಸ್ತಾಂತರಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಜನಪ್ರತಿನಿಧಿಗಳು ಕೆಲ ದಿನ ಕಾಲಾವಕಾಶ ನೀಡುವಂತೆ ನಗರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಗ್ರಾಪಂಗಳ ದಾಖಲೆ ಸುಪರ್ದಿಗೆ ತೆಗೆದುಕೊಳ್ಳುವುದು ಈಗಾಗಲೇ ವಿಳಂಬವಾಗಿದೆ. ನಿಯಮಾನುಸಾರ 2020-21ನೇ ಸಾಲಿನ ಬಜೆಟ್ ತಯಾರಿ ತುರ್ತಾಗಿ ಆಗಬೇಕಿದ್ದು, ಸಂಪೂರ್ಣ ದಾಖಲೆಗಳ ಹಸ್ತಾಂತರವಾಗಬೇಕಿದೆ. ಕೇವಲ ಅಂಕಿ-ಅಂಶಗಳ ಮಾಹಿತಿಯಿಂದ ಬಜೆಟ್ ತಯಾರಿ ಸಾಧ್ಯವಿಲ್ಲ.
ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗುವ ಪ್ರದೇಶಗಳಲ್ಲಿನ ಆಡಳಿತ ಹಾಗೂ ಮೂಲಸೌಕರ್ಯ ಕಲ್ಪಿಸಲು ತೊಂದರೆಯಾಗಲಿದೆ. ಆದ್ದರಿಂದ ಶೀಘ್ರ ಗ್ರಾಪಂಗಳ ಚರ ಸ್ಥಿರಾಸ್ಥಿಗಳ ವಿವರ ಹಸ್ತಾಂತರಿಸಬೇಕು. ಕಾಮಗಾರಿ ಬಿಲ್ ಪಾವತಿ ಬಾಕಿ, ಸಿಬ್ಬಂದಿ ವೇತನ ಸೇರಿ ಮುಂದಿನ ಎಲ್ಲ ಕೆಲಸ ಕಾರ್ಯಗಳನ್ನು ನಗರಸಭೆಯಿಂದಲೇ ನಿರ್ವಹಿಸುವುದಾಗಿ ಪೌರಾಯುಕ್ತ ಆರ್.ಮಂಜುನಾಥ್ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅರಿಶಿನಕುಂಟೆ, ವಿಶ್ವೇಶ್ವರಪುರ, ಬಸವನಹಳ್ಳಿ ಗ್ರಾಪಂಗಳಿಗೂ ತೆರಳಿ ಅಲ್ಲಿಯೂ ದಾಖಲೆಗಳ ಹಸ್ತಾಂತರಕ್ಕೆ ಆಕ್ಷೇಪಣೆ, ಅಭಿಪ್ರಾಯಗಳು ಎದುರಾಗಿದ್ದು, ಸಮಸ್ಯೆ ಬಗೆಹರಿಸಿಕೊಂಡು ಗ್ರಾಪಂ ಅಧಿಕಾರಿಗಳಿಗೆ ದಾಖಲೆಗಳ ಶೀಘ್ರ ಹಸ್ತಾಂತರಕ್ಕೆ ನಿರ್ದೇಶನ ನೀಡಲಾಗಿದೆ.
ತಾಪಂ ಸಹಾಯಕ ನಿರ್ದೇಶಕ ಪದ್ಮನಾಭ್, ನಗರಸಭೆ ಎಇಇ ಎಂ.ಬಿ.ನಾಗರಾಜು, ಕಂದಾಯ ಅಧಿಕಾರಿ ಸವಿತಾ, ಕಂದಾಯ ನಿರೀಕ್ಷಕ ಜಯಪ್ಪ, ಸುಧಾಕರ್, ಜಂಟಿ ಅಭಿಯಂತ ರವಿ, ವಾಜರಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷ ರವಿ, ಸದಸ್ಯರಾದ ಕೆಂಪರಾಜು, ಗಂಗಬೈಲಪ್ಪ, ಪಿಡಿಒ ರವಿಶಂಕರ್ ಮತ್ತಿತರರಿದ್ದರು.
ಹಸ್ತಾಂತರಿಸಬೇಕಾದ ಪ್ರಮುಖ ದಾಖಲೆಗಳು: ಜಿಪಂ ಸಿಇಒ ಅವರಿಂದ ಅನುಮೋದನೆಗೊಂಡ ಹಾಗೂ ಅನುಮೋದನೆಗೊಳ್ಳದ ನೌಕರರ ಮಾಹಿತಿ, ಜನವರಿ1ಕ್ಕೆ ತಂತ್ರಾಂಶದಲ್ಲಿ ದಾಖಲಿಸಿರುವ ಗ್ರಾಮವಾರು ನಮೂನೆ-11ಎ ಮತ್ತು ನಮೂನೆ 11-ಬಿ ದೃಢೀಕೃತ ಪ್ರತಿ, ನಮೂನೆ-9 ವಹಿ ನಿರ್ವಹಣೆ, ದೃಢೀಕೃತ ಡಿಮಾಂಡ್, ಬಾಕಿಪಟ್ಟಿ, ಚರಾಸ್ಥಿ, ಸ್ಥಿರಾಸ್ಥಿ, ಗುತ್ತಿಗೆ ನೀಡಿರುವ ಸ್ಥಿರಾಸ್ಥಿಗಳ ರಿಜಿಸ್ಟ್ಟಾರ್‌ಗಳು, ಚಾಲ್ತಿಯಲ್ಲಿರುವ ಬ್ಯಾಂಕ್‌ಗಳ ವಿವಿಧ ಮಾದರಿಯ ಖಾತೆ ಹಣ, ಬಾಕಿ ವಿವರ, ರಾಜ್ಯ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಅನುದಾನ, ಬಳಕೆ-ಬಳಕೆಯಾಗದೇ ಉಳಿದಿರುವ ಮೊತ್ತ, ಪೂರ್ಣಗೊಂಡು ಬಿಲ್ ಬಾಕಿ ಇರುವ ಕಾಮಗಾರಿ, ಪ್ರಗತಿಯಲ್ಲಿರುವ ಕಾಮಗಾರಿ ವಿವರ, ವೆಚ್ಚದ ಮೊತ್ತ, ಸರ್ಕಾರದ ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ಸೆಸ್‌ಗಳ ಬಾಕಿ ವಿವರ, ವಿವಿಧ ಹಂತದ ನ್ಯಾಯಾಲಯಗಳಲ್ಲಿನ ಪ್ರಕರಣಗಳ ವಿವರ ಸೇರಿ ಹಲವು ಪ್ರಮುಖ ದಾಖಲೆಗಳನ್ನು ಗ್ರಾಪಂ ಅಧಿಕಾರಿಗಳು ನಗರಸಭೆಗೆ ಹಸ್ತಾಂತರಿಸಬೇಕಿದೆ.
ದಾಖಲೆಗಳ ಹಸ್ತಾಂತರಕ್ಕೆ ಅಭ್ಯಂತರವಿಲ್ಲ. ಆದರೆ ಮಾರ್ಚ್ ಆರ್ಥಿಕ ವರ್ಷದ ಕೊನೇ ಒಂದೆಡೆಯಾದರೆ, ಕಾಮಗಾರಿ ಬಿಲ್ ಪಾವತಿ ಬಾಕಿ, ವೇತನ ಪಾವತಿ ಮಾಡಲು ಮಾ.31ವರೆಗೆ ಕಾಲಾವಕಾಶ ನೀಡುವಂತೆ ಗ್ರಾಪಂಗಳ ಸದಸ್ಯರು ಸಭೆ ನಡೆಸಿ ಠರಾವು ಹೊರಡಿಸಿ ಮನವಿ ಮಾಡಿರುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲಾವಕಾಶ ನೀಡಬಹುದಾಗಿದೆ. ಲಕ್ಷ್ಮೀನಾರಾಯಣ್, ತಾಪಂ ಇಒ