

ನವೀನ್ ಶೆಟ್ಟಿ ಕೆರಾಡಿ ಆನೇಕಲ್: ಸುರಗ ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯ ಗೌರೇನಹಳ್ಳಿಗೆ ಹೊಂದಿಕೊಂಡಿರುವ ಕಕ್ಕಮಲ್ಲೇಶ್ವರ ಸ್ವಾಮಿ ದೇವಾಲಯ ಹಾಗೂ ಬೆಟ್ಟಕ್ಕೆ ಕಸದ ಕಂಟಕ ಎದುರಾಗಿದೆ.
ಪುರಾಣ ಪ್ರಸಿದ್ಧ ದೇವಾಲಯಕ್ಕೆ ಒಂದೆಡೆ ಭೂಗಳ್ಳರ ಹಾವಳಿ, ಇನ್ನೊಂದಡೆ ಕಸದ ಮಾಫಿಯಾ ತಲೆ ನೋವಾಗಿ ಪರಿಣಮಿಸಿದ್ದು, ನೂರಾರು ವರ್ಷಗಳ
ಇತಿಹಾಸ ಇರುವ ದೇವಾಲಯಕ್ಕೆ ಸಂಪರ್ಕ ರಸ್ತೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ರಿಯಲ್ ಎಸ್ಟೇಟ್, ಭೂ ಮಾಫಿಯಾ, ಕೆಲ ರಾಜಕಾರಣಿಗಳು ಸೇರಿ ಕೆರೆಕುಂಟೆಗಳನ್ನು ನುಂಗಿ ಹಾಕಿದ್ದು, ಈಗ ದೇವಾಲಯಗಳ ಭೂಮಿ ಮೇಲೆಯೂ ಖದೀಮರ ಕಣ್ಣು ಬಿದ್ದಿದೆ. ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೆ ದೇವಾಲಯದ ಬಾಗಿಲವರೆಗೆ ತಡೆಗೋಡೆ ಹಾಕಿ ದೇಗುಲದ ಸಂಪರ್ಕ ರಸ್ತೆಯನ್ನೂ ಮುಚ್ಚಿಹಾಕುವ ಹಂತ ತಲುಪಿದೆ.
ಪುರಾತನ ದೇಗುಲ: ಆನೇಕಲ್ ಪಟ್ಟಣದ ಪಶ್ಚಿಮದಲ್ಲಿರುವ ಪುರಾತನ ಕಕ್ಕ ಮಲ್ಲೇಶ್ವರ ಸ್ವಾಮಿ ಬೆಟ್ಟದಲ್ಲಿ ಶಿವನ ದೇವಾಲಯವಿದೆ, ಇತ್ತೀಚಿಗೆ ದೇಗುಲದ ಜೀರ್ಣೋದ್ದಾರವೂ ಆಗಿದೆ. ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರಿದ್ದಾರೆ. ವರ್ಷದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಧನುರ್ಮಾಸದ ಎಳ್ಳು ಅಮಾವಾಸ್ಯೆಯಂದು ನಡೆಯುವ ಉತ್ಸವದಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಶಿವರಾತ್ರಿ, ಕಾರ್ತಿಕ ಮಾಸದ ನಾಲ್ಕು ಸೋಮವಾರಗಳೂ ಸಾವಿರಾರು ಭಕ್ತರು ದೇವರ ಸನ್ನಿಧಿಗೆ ಬಂದು ಹರಕೆ ತೀರಿಸಿಕೊಳ್ಳುತ್ತಾರೆ. ಪ್ರತಿ ಸೋಮವಾರ ಅಮಾವಾಸ್ಯೆಗಳೆಂದು ವಿಶೇಷ ಪೂಜೆ ಅಭಿಷೇಕಗಳು ನಡೆಯುತ್ತವೆ. ಸರಳ ವಿವಾಹಗಳು ಇಲ್ಲೇ ಜರುಗುತ್ತವೆ. ಇದು ಧಾರ್ಮಿಕ ಕೇಂದ್ರವಷ್ಟೇ ಅಲ್ಲದೇ ಪ್ರಕೃತಿಯ ಸೊಬಗು ತುಂಬಿರುವ ತಾಣವೂ ಆಗಿದೆ. ಇಂಥ ದೇಗುಲದಕ್ಕೆ ಈಗ ಸಂಚಕಾರ ಬಂದಿದೆ.
ಕಕ್ಕ ಮಲ್ಲೇಶ್ವರ ಸ್ವಾಮಿಗೆ ತನ್ನದೇ ಆದ ಇತಿಹಾಸ ಇದೆ, ಇಂತಹ ದೇವಾಲಯಕ್ಕೆ ಯಾವುದೇ ತೊಂದರೆ ಆಗದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ, 279 ವರ್ಷಗಳ ಇತಿಹಾಸ ಇದೆ, ಆನೇಕಲ್ ತಾಲೂಕಿನ ಸೌಂದರ್ಯದ ಗಣಿ ಆಗಿದೆ, 80 ಎಕರೆ ಇದ್ದ ಭೂಮಿ ಒತ್ತುವರಿ ಮಾಡಿದ್ದು ಇದನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ತಾ.ನಂ.ಕುಮಾರಸ್ವಾಮಿ ದೇಗುಲದ ಟ್ರಸ್ಟ್ ಗೌರವಾಧ್ಯಕ್ಷ ದೇವಾಲಯದ ಉಳಿವಿಗಾಗಿ ಹೋರಾಟ ಒಂದೇ ಬಾಕಿ ಇದೆ. ಸುತ್ತಮುತ್ತಲ ಭೂಮಿಯನ್ನು ಭೂಗಳ್ಳರು ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದು, ದೇವಾಲಯಕ್ಕೆ ಬರಲು ಸರಿಯಾದ ರಸ್ತೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಪುರಾತನ ದೇಗುಲಕ್ಕೆ ಇಂಥ ಪರಿಸ್ಥಿತಿ ಬಂದಿರುವುದರಿಂದ ಮನಸ್ಸಿಗೆ ನೋವಾಗುತ್ತಿದೆ. ಪ್ರಸನ್ನಕುಮಾರ್ ದೇಗುಲದ ಭಕ್ತ