

ಮಂಡ್ಯ: ಕರೊನಾ ವೈರಸ್‌ನಿಂದ ಮೃತಪಡುವವರ ಅಂತ್ಯಕ್ರಿಯೆ ಮಾಡಲು 5 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ಮಸೀದಿಗೆ ಸೇರಿದ ಯುವಕರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾ ವಕ್ಫ್ ಮಂಡಳಿ ಸಮಿತಿ ಸದಸ್ಯರು ಶನಿವಾರ ತಹಸೀಲ್ದಾರ್ ಎಲ್.ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಕೋವಿಡ್‌ನಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕಬರ್‌ಸ್ತಾನ್‌ಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕರೊನಾ ಸೋಂಕಿನಿಂದ ಮೃತಪಡುವವರನ್ನು ಪ್ರತ್ಯೇಕವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಜಾಗ ನೀಡಿರುವ ರೀತಿ ಮಂಡ್ಯ ಜಿಲ್ಲೆಯಲ್ಲೂ 5 ಎಕರೆ ಜಾಗವನ್ನು ಪ್ರತ್ಯೇಕವಾಗಿ ಮುಸಲ್ಮಾನರ ಮಕಾನ್‌ಗೆ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇಂತಹ ಸಂದರ್ಭದಲ್ಲಿ ಕೋವಿಡ್ ರೋಗಿಗಳ ಅಂತ್ಯಕ್ರಿಯೆಯನ್ನು ಮಸೀದಿಗೆ ಸೇರಿದ ಯುವಕರು ತಮ್ಮ ಸ್ವ ಇಚ್ಛೆ ಹಾಗೂ ಸ್ವಂತ ಖರ್ಚಿನಿಂದ ಸರ್ಕಾರ ನಿಗದಿಪಡಿಸುವ ಪಿಪಿಇ ಕಿಟ್ ಧರಿಸಿ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನಿಯಮದಂತೆ ಮಾಡಲಾಗುವುದು. ಇದಕ್ಕೆ ಅನುಮತಿ ನೀಡಬೇಕು. ಅಂತೆಯೇ, ಶವಗಳನ್ನು ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಿಲಾ ವಕ್ಫ್ ಮಂಡಳಿ ಅಧ್ಯಕ್ಷ ಶೇಖ್ ಉಬೇದುಲ್ಲಾ, ನಗರಸಭಾ ಸದಸ್ಯರಾದ ನಹೀಂ, ಜಾಕೀರ್‌ಪಾಷ ಇತರರಿದ್ದರು.