ರೈತರಿಗೆ ಗಾಲ್ಫ್ ಕ್ಲಬ್ ಹೆಸರಿನಲ್ಲಿ ಭೂ ವಂಚನೆ

ugra narasimha
Published on

ಮೈಸೂರು: ಕೋಚನಹಳ್ಳಿಯಲ್ಲಿ ಗಾಲ್ಫ್ ಕ್ಲಬ್‌ಗಾಗಿ ಭೂಮಿ ನೀಡಿದ ಬಳಿಕ ವಂಚನೆಗೊಳಗಾಗಿರುವ ರೈತರ ಸಮಸ್ಯೆ ಒಂದು ವಾರದೊಳಗೆ ಬಗೆಹರಿಸದಿದ್ದರೆ ಈಗ ಹಾಕಿರುವ ಬೇಲಿ ಕಿತ್ತು ಹಾಕಲಾಗುವುದು ಎಂದು ಕೋಚನಹಳ್ಳಿ ಭೂಮಿ ಕಳೆದುಕೊಂಡ ರೈತರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.


ಕೋಚನಹಳ್ಳಿಯಲ್ಲಿನ ರೈತರಿಂದ ಹೆರಿಟೇಜ್ ಗಾಲ್ಫ್ ಕ್ಲಬ್ ಹೆಸರಿನಲ್ಲಿ 18 ವರ್ಷಗಳ ಹಿಂದೆ ಭೂಮಿ ಖರೀದಿಸುವ ವೇಳೆ ಅವರಿಗೆ ಕಾಯಂ ಉದ್ಯೋಗ ನೀಡುವುದಾಗಿ ಆಸ್ವಾಸನೆ ನೀಡಲಾಗಿತ್ತು.

ಆದರೆ, ಅದು ಗಾಲ್ಫ್ ಕ್ಲಬ್ ನಿರ್ಮಾಣಕ್ಕಾಗಿ ಅಲ್ಲ ಬದಲಾಗಿ ಬೇನಾಮಿ ವ್ಯಕ್ತಿಗಳ ಅಕ್ರಮ ವ್ಯವಹಾರಕ್ಕಾಗಿ ಖರೀದಿಸಿದ್ದಾಗಿ ತಿಳಿದುಬಂದಿದೆ. ಈ ಕುರಿತ ಹೋರಾಟ ಸುಮಾರು 3 ವರ್ಷಗಳಿಂದ ನಡೆಯುತ್ತಿದ್ದರೂ ವಿವಾದ ಬಗೆಹರಿಸಿಲ್ಲ ಎಂದು ಹೋರಾಟಗಾರ ಉಗ್ರನರಸಿಂಹೇಗೌಡ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಗ್ರಾಮದ ಸುಮಾರು 110 ಕುಟುಂಬಗಳು ಸುಮಾರು 220 ಎಕರೆ ಭೂಮಿಯನ್ನು ಹೆರಿಟೇಜ್ ಗಾಲ್ಫ್ ಕ್ಲಬ್ ಹೆಸರಿನ ಸಂಸ್ಥೆಗೆ ಗಾಲ್ಫ್ ಕ್ಲಬ್‌ಗಾಗಿ ಮಾರಾಟ ಮಾಡಿವೆ. ಆದರೆ, ಗಾಲ್ಫ್ ಕ್ಲಬ್ ತೆರೆಯಲೇ ಇಲ್ಲ. ಬದಲಾಗಿ ಕಂಪನಿ ಮುಚ್ಚಲಾಗಿದೆ ಎಂಬ ಕಾರಣ ನೀಡಲಾಗಿದೆ ಎಂದು ತಿಳಿಸಿದರು.


ವಾಸ್ತವವಾಗಿ ಮೂರೂ ಪ್ರಮುಖ ಪಕ್ಷಗಳ ಮುಖಂಡರು ಬೇನಾಮಿ ಹೆಸರಿನಲ್ಲಿ ರೈತರ ಭೂಮಿ ಖರೀದಿಸಿರುವ ಶಂಕೆಯಿದೆ. ಹೀಗಾಗಿ ಇನ್ನೂ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಈಗ ಹಾಕಿರುವ ತಂತಿ ಬೇಲಿ ಕಿತ್ತು ರೈತರು ಹೋರಾಟ ನಡೆಸಲಿದ್ದಾರೆ. ಆ ಸಂದರ್ಭದಲ್ಲಿಯಾದರೂ ನಿಜವಾಗಿ ಭೂಮಿ ಖರೀದಿಸಿರುವವರು ಯಾರೆಂಬುದು ಬಹಿರಂಗೊಳ್ಳಲಿದೆ. ಹೀಗಾಗಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಬಹುದಾಗಿದೆ ಎಂದರು.
ಮುಖಂಡರಾದ ಚಂದ್ರಶೇಖರ್ ಮೇಟಿ, ಆನಂದೂರು ಪ್ರಭಾಕರ್, ಮಹೇಶ್, ನಾಗನಹಳ್ಳಿ ವಿಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net