

ಶಿವಮೊಗ್ಗ: ಎರಡು ವರ್ಷದ ಹಿಂದೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಆರಂಭವಾದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಶಾಶ್ವತ ಕ್ಯಾಂಪಸ್ ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ 22.19 ಎಕರೆ ಜಾಗ ಮಂಜೂರು ಮಾಡಲಾಗಿದೆ.
ನವದೆಹಲಿಯಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಈ ವಿಷಯವನ್ನು ತಿಳಿಸಿದ್ದಾರೆ. ಈ ವಿಶ್ವವಿದ್ಯಾಲಯ ಗೃಹ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಕ್ಯಾಂಪಸ್ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸಲು ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ನೂತನ ಕ್ಯಾಂಪಸ್‌ಗೆ ಅಗತ್ಯವಿರುವ ಕಟ್ಟಡ, ವಸತಿ ಗೃಹ, ಕಾಂಪೌಂಡ್ ನಿರ್ಮಾಣ ಮುಂತಾದ ಸೌಕರ್ಯ ಕಲ್ಪಿಸಬೇಕು. ಎರಡು ವರ್ಷಗಳಿಂದ ತಾತ್ಕಾಲಿಕವಾಗಿ ರಾಷ್ಟ್ರೀಯ ರಕ್ಷಾ ವಿವಿ ಸೀಮಿತ ಜಾಗದಲ್ಲಿ ನಡೆಯುತ್ತಿದೆ. ಹೀಗಾಗಿ ವಿಶಾಲ ಕ್ಯಾಂಪಸ್ ನಿರ್ಮಾಣಕ್ಕೆ ಸಹಕಾರ ಕೋರಿದರು.
ರಕ್ಷಾ ವಿವಿಗೆ ಬಲ
ರಾಗಿಗುಡ್ಡದಲ್ಲಿ 2023ರ ಮಾ.24ರಂದು ರಾಷ್ಟ್ರೀಯ ರಕ್ಷಾ ವಿವಿ ಆರಂಭವಾಗಿತ್ತು. ದೇಶದ 5ನೇ ಕ್ಯಾಂಪಸ್ ಇದಾಗಿದ್ದು, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನರೇಂದ್ರ ಮೋದಿ 2009ರಲ್ಲಿ ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ರಕ್ಷಾ ಶಕ್ತಿ ವಿವಿ ಆರಂಭಿಸಿದ್ದರು. ಅವರು ಪ್ರಧಾನಿಯಾದ ಬಳಿಕ ರಾಷ್ಟ್ರೀಯ ರಕ್ಷಾ ವಿವಿ ಹೆಸರಿನಲ್ಲಿ ದೇಶಕ್ಕೆ ವಿಸ್ತರಣೆ ಮಾಡಿದ್ದರು. ಗುಜರಾತ್‌ನ ಗಾಂಧಿ ನಗರದಲ್ಲಿ ವಿವಿ ಕೇಂದ್ರ ಸ್ಥಾನವಿದೆ. ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಪುದುಚೇರಿಯಲ್ಲಿ ಒಂದೊಂದು ಕ್ಯಾಂಪಸ್‌ಗಳಿವೆ. ಶಿವಮೊಗ್ಗದಲ್ಲಿ ಆರಂಭವಾದ ಐದನೇ ಕ್ಯಾಂಪಸ್‌ಗೆ ಶಾಶ್ವತ ನೆಲೆ ಕಲ್ಪಿಸುವ ಪ್ರಯತ್ನ ಇದೀಗ ಆರಂಭವಾಗಿದೆ.
ಇಲ್ಲಿ ವ್ಯಾಸಂಗ ಮಾಡಿದವರಿಗೆ ಮಿಲಿಟರಿ ವ್ಯವಸ್ಥೆ, ರಾ, ಸಿಬಿಐ, ವಾಯುಸೇನೆ ಮುಂತಾದ ಕಡೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶವಿದೆ. ಪೊಲೀಸ್ ಇಲಾಖೆಗೆ ಸೇರುವವರು ಬಹುತೇಕ ಸಂಗತಿಗಳನ್ನು ಅಭ್ಯಾಸ ಮಾಡಬಹುದಾಗಿದೆ. ಸ್ಮಾರ್ಟ್ ಪೊಲೀಸಿಂಗ್, ಡಿಜಿಟಲ್ ಇನ್ವೆಸ್ಟಿಂಗ್‌ಗೆ ಪೂರಕ ಕೋರ್ಸ್‌ಗಳಿವೆ.
ಚೌಹಾಣ್ ಭೇಟಿಯಾದ ಬಿವೈಆರ್
ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಗುರುವಾರ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಭೇಟಿಯಾದರು. ಈ ಬಾರಿ ಮುಂಗಾರು ಮಳೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಗ್ರಾಮೀಣ ಭಾಗದಲ್ಲಿ ಅಪಾರ ಪ್ರಮಾಣದ ರಸ್ತೆಗಳಿಗೆ ಹಾನಿಯಾಗಿದೆ. ಒಟ್ಟು 341 ಕಿ.ಮೀ. ರಸ್ತೆಗೆ ಮರು ಡಾಂಬರೀಕರಣ ಮಾಡಬೇಕಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.