

ಮಂಡ್ಯ: ನಗರದ ಹೊರವಲಯದಲ್ಲಿ ನಿವೃತ್ತ ಪೊಲೀಸರಿಗೆ ಹಂಚಿಕೆಯಾಗಬೇಕಿರುವ 27 ಎಕರೆ ನಿವೇಶನ ವಿವಾದ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಂಗಳ ತಲುಪಿದೆ. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಿವೃತ್ತ ಪೊಲೀಸರು ಸಚಿವರಿಗೆ ಮನವಿ ಸಲ್ಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಉಸ್ತುವಾರಿ ಕಚೇರಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಈ ವೇಳೆ ಮನವಿ ಸಲ್ಲಿಸಿದ ನಿವೃತ್ತ ಪೊಲೀಸರು, ನಿವೇಶನಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಹಸ್ತಾಂತರ ಮಾಡಿಸುವ ವಿಚಾರದಲ್ಲಿ ಉದ್ಯಮಿ ಚಂದ್ರಶೇಖರ್ ನಿರ್ಲಕ್ಷೃ ಮಾಡುತ್ತಿದ್ದಾರೆಂದು ಆಕ್ಷೇಪಿಸಿದರು. ಕೋವಿಡ್ ಹಾಗೂ ತಾಂತ್ರಿಕ ತೊಡಕಿನ ಬಗ್ಗೆ ಪ್ರಸ್ತಾಪಿಸಿ ಕಾಲಾವಕಾಶ ನೀಡುವಂತೆ ಕೇಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಶೇಖರ್‌ಗೆ ಸೇರಿದ 27 ಎಕರೆ ನಿವೇಶನವನ್ನು 2010ರಲ್ಲಿ ಜಿಲ್ಲಾ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಲು ಒಡಂಬಡಿಕೆಯಾಗಿತ್ತು. ಈ ಪೈಕಿ ಈವರೆಗೆ 16.5 ಎಕರೆ ಸಂಘಕ್ಕೆ ನೋಂದಣಿಯಾಗಿದೆ. ಆದರೆ ಖಾತೆಯಾಗಿಲ್ಲ. ಮಾತ್ರವಲ್ಲದೆ ನಿವೇಶನಕ್ಕೆ ರಸ್ತೆ, ಯುಜಿಡಿ, ನೀರಿನ ಪೈಪ್‌ಲೈನ್ ಅಳವಡಿಸಿಲ್ಲ. ಆದ್ದರಿಂದ ತ್ವರಿತವಾಗಿ ಕೆಲಸ ಪೂರ್ಣಗೊಳಿಸಿ ಹಸ್ತಾಂತರ ಮಾಡುವಂತೆ ಹಲವು ದಿನದಿಂದ ಕೇಳಲಾಗುತ್ತಿದೆ. ಅಂತೆಯೇ ಜನವರಿ ವೇಳೆಗೆ ಕೊಡುವುದಾಗಿ ಹೇಳಿದ್ದರು. ಆದರೂ ಯಾವುದೇ ಬೆಳವಣಿಗೆಯಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಸಚಿವರು, ಈ ಬಗ್ಗೆ ಮಾಹಿತಿ ಪಡೆದು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.