

ಕುಮಟಾ: ಜಮೀನಿನ ವಿಷಯದಲ್ಲಿ ಅಕ್ಕಪಕ್ಕದ ಮನೆಯವರು ಮಾಡಿಕೊಂಡಿದ್ದ ತಕರಾರು ಹೊಡೆದಾಟದ ಮಟ್ಟಕ್ಕೆ ಇಳಿದು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ ಪ್ರಸಂಗ ಗುರುವಾರ ನಡೆದಿದೆ.
ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯಿತಿಯ ಮೊರ್ಸೆ ನಿವಾಸಿ ಹನುಮಂತ ಗಣಪತಿ ನಾಯ್ಕ ಬೆಣ್ಣೆಹಳ್ಳದಂಚಿನ ಬೆಟ್ಟದಲ್ಲಿ ಸೊಪ್ಪು ಕಡಿಯುತ್ತಿದ್ದಾಗ ಆರೋಪಿ ಮಂಜುನಾಥ ಮಾದೇವ ನಾಯ್ಕ ಕಟ್ಟಿಗೆ ಬಡಿಗೆಯಿಂದ ಹಾಗೂ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ತಪ್ಪಿಸಿಕೊಂಡು ಬರುವಾಗ ಪುನಃ ಕತ್ತಿಯಿಂದ ಕೈಗೆ ಹೊಡೆದು ಗಾಯಗೊಳಿಸಿದ್ದು ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಷಯವನ್ನು ಪತ್ನಿಗೆ ಹೇಳುತ್ತಿರುವಾಗ ಅಲ್ಲಿಗೆ ಬಂದ ಮತ್ತೊಬ್ಬ ಆರೋಪಿ ಯೋಗೇಶ ಮಾದೇವ ನಾಯ್ಕ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹನುಮಂತ ಗಣಪತಿ ನಾಯ್ಕ ಅವರ ಪತ್ನಿ ಸುಜಾತಾ ಹನುಮಂತ ನಾಯ್ಕ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅದಕ್ಕೆ ಪ್ರತಿಯಾಗಿ ದಾಖಲಾದ ದೂರಿನಲ್ಲಿ, ಮಂಜುನಾಥ ಮಾದೇವ ನಾಯ್ಕ ತೆಂಗಿನಕಾಯಿ ಕೀಳಿಸಲು ತೋಟಕ್ಕೆಂದು ಹೋದವರು ಬೆಣ್ಣೆ ಹಳ್ಳದ ಅಂಚಿನಲ್ಲಿ ತೊಡೆ ಹಾಗೂ ಕೈಬೆರಳುಗಳಿಗೆ ಗಾಯವಾಗಿ ಬಿದ್ದಿದ್ದರು. ನಂತರ ವಿಚಾರಿಸಲಾಗಿ, ಆರೋಪಿ ಹನುಮಂತ ಗಣಪತಿ ನಾಯ್ಕ ಸೊಪ್ಪು ಕತ್ತರಿಸುವ ಕತ್ತಿಯಿಂದ ಹಲ್ಲೆಗೈದು ಗಂಭಿರವಾಗಿ ಗಾಯಪಡಿಸಿದ್ದು ಜೀವ ಬೆದರಿಕೆ ಹಾಕಿದ್ದಾರೆ. ಎಂದು ಗಾಯಾಳು ಮಂಜುನಾಥ ಮಾದೇವ ನಾಯ್ಕ ಪತ್ನಿ ಅನಿತಾ ಮಂಜುನಾಥ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.