ದ್ವೇಷಕ್ಕಾಗಿ ಅಡಕೆ, ತೆಂಗಿನ ತೋಟ ನಾಶ ; ಹೇರೂರು ಗ್ರಾಮದಲ್ಲಿ ಜಮೀನು ವಿಚಾರಕ್ಕೆ 2 ಗುಂಪುಗಳ ನಡುವೆ ಜಗಳ

19kunigal1
Published on

ಕುಣಿಗಲ್: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹೇರೂರು ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ವ್ಯಾಜ್ಯ ವಿಕೋಪಕ್ಕೆ ತಿರುಗಿ ಕುಪಿತಗೊಂಡ ಗುಂಪು ನಾಗರಾಜು ಎಂಬುವವರ ಅಡಕೆ, ತೆಂಗು, ಬಾಳೆ ಮರಗಳನ್ನು ಕತ್ತರಿಸಿದೆ. ಈ ಸಂಬಂಧ ಪೊಲೀಸರು ನಾಗರಾಜು ಅವರ ಚಿಕ್ಕಪ್ಪನ ಮಗ ಸಂಜೀವ್ ಕುಮಾರ ಎಂಬಾತನನ್ನು ಬಂಧಿಸಿದ್ದಾರೆ.

2.31 ಎಕರೆ ಜಮೀನು ನಾಗರಾಜು ಅವರ ತಂದೆ ಲೇಟ್ ಹನುಮಂತಯ್ಯ ಹೆಸರಿನಲ್ಲಿದ್ದು, ಈ ಜಮೀನಿನಲ್ಲಿ ನಾಗರಾಜು 150 ಬಾಳೆಗಿಡ, ಮೂರು ವರ್ಷದ 100 ತೆಂಗಿನ ಗಿಡ, 5 ವರ್ಷದ ಹಿಂದೆ 800 ಅಡಕೆ ಗಿಡ ಹಾಕಿದ್ದು ಅಡಕೆ ಫಸಲು ಬಿಡುವ ಹಂತಕ್ಕೆ ಬಂದಿತ್ತು. ಆದರೆ ಗ್ರಾಮದ ಮತ್ತೊಂದು ಕಡೆ 27ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಾಗರಾಜು ಹಾಗೂ ಸಂಜೀವ್‌ಕುಮಾರ್, ಪುಟ್ಟರೇವಣ್ಣ ಅವರ ನಡುವೆ ವ್ಯಾಜ್ಯವಾಗಿ ಈ ಸಂಬಂಧ ಡಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಸಜೀವ್‌ಕುಮಾರ್ ನಾಗರಾಜುಗೆ ಮಧ್ಯವರ್ತಿಗಳ ಮೂಲಕ ಮಾತುಕತೆಗೆ ಹೇಳಿ ಕಳಿಸಿದ್ದ. ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಅಲ್ಲೇ ಇತ್ಯರ್ಥವಾಗಲಿ ಎಂದು ನಾಗರಾಜು ಆಹ್ವಾನ ತಿರಸ್ಕರಿಸಿದ್ದರು. ಇದರಿಂದ ಕೋಪಗೊಂಡ ಸಂಜೀವ್‌ಕುಮಾರ್, ಪುಟ್ಟರೇವಣ್ಣ, ಕಪ್ಪಯ್ಯ ಮಂಗಳವಾರ ಮಧ್ಯರಾತ್ರಿ ಜಮೀನಿಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಇದೇ ಸಮಯಕ್ಕೆ ತೋಟಕ್ಕೆ ನೀರು ಹಾಯಿಸಲು ನಾಗರಾಜು ಮಗನ ಜತೆ ಹೋದಾಗ ಗಿಡಗಳನ್ನು ಕತ್ತರಿಸುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ನಾಗರಾಜು ಕಿರುಚಿಕೊಂಡಿದ್ದರಿಂದ ಮೂವರೂ ಓಡಿಹೋಗಿದ್ದಾರೆ. ನಾಗರಾಜು ಪಟ್ಟಣ ಠಾಣೆಗೆ ದೂರು ನೀಡಿದ್ದು, ಪುಟ್ಟರೇವಣ್ಣ, ಕಪ್ಪಯ್ಯ ತಲೆಮರಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ಕಾಫಿ, ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದೆ, ಇದರಿಂದ ಬರುವ ಆದಾಯದಲ್ಲಿ ಸ್ವಲ್ಪ ಹಣವನ್ನು ತೋಟಕ್ಕೆ ಬಳಸುತ್ತಿದೆ. ಕಷ್ಟಪಟ್ಟು ತೆಂಗು, ಅಡಕೆ, ಬಾಳೆ ಗಿಡಗಳನ್ನು ಹಾಕಿ ಅವುಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದೆ. ದ್ವೇಷದಿಂದ ಸಂಜೀವ್‌ಕುಮಾರ್, ಪುಟ್ಟರೇವಣ್ಣ, ಕಪ್ಪಯ್ಯ ದುಷ್ಕೃತ್ಯ ಎಸಗಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ ನಾಗರಾಜು ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net