

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗುವ ಉದ್ಯಮಿಗಳು ಹಾಗೂ ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಕೃಷಿ ಭೂಮಿ ಬಳಸುವವರು ಇನ್ನು ಮುಂದೆ ಭೂಪರಿವರ್ತನೆಗಾಗಿ ವರ್ಷಗಟ್ಟಲೆ ಅಲೆದಾಡುವ ಅಗತ್ಯವಿಲ್ಲ. ಕೇವಲ ಮೂರೇ ದಿನಗಳಲ್ಲಿ ಪರಿವರ್ತನೆಯಾಗಿರುವ ಆದೇಶ ಅರ್ಜಿದಾರರ ಕೈಗೆ ಸಿಗುವ ವ್ಯವಸ್ಥೆ ದೀಪಾವಳಿಯ ಕೊಡುಗೆಯಾಗಿ ಜಾರಿಗೆ ಬರಲಿದೆ. ಆ ಮೂಲಕ ರೆಡ್ ಟೇಪಿಸಂ ವ್ಯವಸ್ಥೆ ಅಂತ್ಯವಾಗಲಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಾದ ಕೈಗಾರಿಕೆ, ವಸತಿ, ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಪರಿವರ್ತನೆ ಮಾಡಿಕೊಳ್ಳಬೇಕು. ಆದರೆ ಪರಿವರ್ತನೆ ಈಗ ಅಷ್ಟು ಸುಲಭವಲ್ಲ. ದಾಖಲೆಗಳಿಗಾಗಿಯೇ ವರ್ಷಗಟ್ಟಲೆ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕು. ಲಂಚಕ್ಕಾಗಿ ದಾಖಲೆಗಳ ಬಗ್ಗೆ ಪದೇ ಪದೆ ಆಕ್ಷೇಪ ವ್ಯಕ್ತಪಡಿಸಲಾಗುತ್ತದೆ. ಇಂಥ ಅವ್ಯವಸ್ಥೆಗಳಿಂದ ಬೇಸತ್ತ ಸಾಕಷ್ಟು ಹೂಡಿಕೆದಾರರು ರಾಜ್ಯದಿಂದ ಹಿಂದಕ್ಕೆ ಹೋಗಿರುವ ಉದಾಹರಣೆಯೂ ಇದೆ. ಅಂತಹ ಎಲ್ಲ ಸಮಸ್ಯೆಗಳಿಗೂ ತೆರೆ ಎಳೆಯಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಈಗ ಕೃಷಿ ಭೂಮಿಯನ್ನು ಅನ್ಯಉದ್ದೇಶಕ್ಕೆ ಬಳಸುವಂತಿಲ್ಲ. ಕೃಷಿಯೇತರ ಭೂಮಿಯನ್ನಷ್ಟೇ ಬಳಸಬಹುದು. ಉದ್ಯಮಿಗಳ ಒತ್ತಡದಿಂದಾಗಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು 79ಎ ಮತ್ತು 79ಬಿ ರದ್ದು ಮಾಡಿದೆ. ಇದರಿಂದ ಯಾರು ಬೇಕಾದರೂ ಭೂಮಿ ಖರೀದಿಸುವುದಕ್ಕೆ ಅವಕಾಶವಾಗಿದ್ದು, ಸುಮಾರು 400 ಕೋಟಿ ರೂ. ಮುದ್ರಾಂಕ ಶುಲ್ಕ ಹೆಚ್ಚುವರಿ ಸಂಗ್ರಹವಾಗಿದೆ. ಇದರ ಮುಂದುವರಿದ ಭಾಗವಾಗಿ ಸರ್ಕಾರ ಭೂ ಪರಿವರ್ತನೆಯನ್ನು ಸರಳಗೊಳಿಸುತ್ತಿದೆ.
ಡಿಸಿಗಳೇ ಹೊಣೆ: ಯಾವುದೇ ಭೂ ಪರಿವರ್ತನೆಗೆ 3 ದಿನಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಗಾರರಾಗಿರುತ್ತಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಮೂಲಗಳು ಹೇಳುತ್ತವೆ.
ಉಲ್ಲಂಘನೆಯಾಗಿದ್ದರೆ ಕ್ರಮ: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವಂತೆ ಅರ್ಜಿ ಸಲ್ಲಿಸುವಾಗ ನಿಯಮಗಳ ಉಲ್ಲಂಘನೆಯಾಗಿದ್ದರೆ ಅಂತಹ ಅರ್ಜಿ ತಿರಸ್ಕರಿಸಲಾಗುತ್ತದೆ. ಆಗ ಶುಲ್ಕ ಪಾವತಿಸಿರುವ ಹಣವನ್ನು ವಾಪಸ್ ಮಾಡದೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಯಾವುದೇ ಅರ್ಜಿ ಸಿಡಿಪಿಯ ಜತೆಗೂ ಹೊಂದಾಣಿಕೆಯಾಗಿರಬೇಕು ಎಂದು ಕಂದಾಯ ಇಲಾಖೆಯ ಮೂಲಗಳು ಹೇಳುತ್ತವೆ.
ತೊಂದರೆ ಎಂಬ ವಾದ
ಈ ವ್ಯವಸ್ಥೆ ಜಾರಿಗೆ ಬಂದರೆ ರೈತರಿಗೆ ಕೃಷಿ ಭೂಮಿಯೇ ಉಳಿಯುವುದಿಲ್ಲ, ಅನ್ನದಾತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾನೆ. ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯ ಹೆಚ್ಚಾಗುತ್ತವೆ ಎಂಬ ವಾದವೂ ಇದೆ. ಇದನ್ನು ಸರ್ಕಾರ ಹೇಗೆ ಬಗೆಹರಿಸಲಿದೆ ಎಂಬುದನ್ನು ನೋಡಬೇಕು.
ಬಂಡವಾಳ ಹೂಡುವವರಿಗಾಗಿ ಸರ್ಕಾರ ಇಂತಹ ವ್ಯವಸ್ಥೆ ತರಲು ಮುಂದಾಗಿದೆ. ಬಡವರು ಹಾಗೂ ಸಣ್ಣ ರೈತರು ಭೂಮಿಯೇ ಇಲ್ಲವೇ ವಂಚಿತರಾಗುತ್ತಾರೆ. ಇಂತಹ ವ್ಯವಸ್ಥೆ ರೈತರಿಗೆ ಪ್ರತಿಗಾಮಿ ಹಾಗೂ ಮಾರಕವಾದ ವ್ಯವಸ್ಥೆಯಾಗುತ್ತದೆ.
* ಜೆ.ಸಿ. ಬಯ್ಯಾರೆಡ್ಡಿ , ಅಧ್ಯಕ್ಷ, ಪ್ರಾಂತ ರೈತ ಸಂಘ
ಉಳ್ಳವರ ಕೈಗೆ ಭೂಮಿ ಸಿಗುವಂತಾಗುತ್ತದೆ. ರೈತರು ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಭೂಮಿಯ ಬೆಲೆ ಸಹ ಭಯಂಕರ ಹೆಚ್ಚಾಗುವ ಅಪಾಯವಿದೆ. ಅಸಮಾನತೆ ಇನ್ನಷ್ಟು ಹೆಚ್ಚಾಗುತ್ತದೆ. ಇಂತಹ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತೇವೆ.
* ಕುಮಾರ ಸಮತಲ, ಕಾರ್ಯದರ್ಶಿ ಮಂಡಳಿ ಸದಸ್ಯ ಭೂಮಿ ಮತ್ತು ವಸತಿ ಹೋರಾಟ ಸಮಿತಿ
ದಾಖಲೆಗಳಿಗಾಗಿ ಅಲೆದಾಡಿಸುತ್ತ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ನೇರವಾಗಿ ಡಿಸಿಗಳೇ ಮೂರು ದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡಬೇಕೆಂದು ಆದೇಶ ಮಾಡಲಾಗುತ್ತಿದೆ. | ಆರ್. ಅಶೋಕ್ ಕಂದಾಯ ಸಚಿವ
ಅನುಕೂಲವೇನು?
· ಉದ್ದಿಮೆಗಳ ಆರಂಭಕ್ಕೆ ಕಾಯುವಂತಿಲ್ಲ
· ಕಚೇರಿಯಿಂದ ಕಚೇರಿ ಅಲೆದಾಟ ತಪು್ಪತ್ತದೆ, ವಿಎಯಿಂದ ಡಿಸಿ ತನಕ ಭ್ರಷ್ಟಚಾರ ನಿಯಂತ್ರಣ
· ರೆಡ್ ಟೇಪಿಸಂ ಅಂತ್ಯ
· ಹೆಚ್ಚಿನ ದಾಖಲೆಗಳ ಅಗತ್ಯ ಇರುವುದಿಲ್ಲ
· ಹೂಡಿಕೆ ಆಕರ್ಷಣೆಗೆ ಅನುಕೂಲ
· ಉದ್ದಿಮೆಗಳಲ್ಲಿ ವಿಶ್ವಾಸ ವೃದ್ಧಿ
· ಸರ್ಕಾರದ ಆದಾಯ ವೃದ್ಧಿಗೂ ಅನುಕೂಲ
ಶುಲ್ಕ ಎಷ್ಟಿರುತ್ತದೆ?
ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಏಕರೂಪದ ಶುಲ್ಕ ನಿಗದಿ ಸಾಧ್ಯವಿಲ್ಲ. ಆದ್ದರಿಂದ ಭೂಮಿಯ ಮಾರ್ಗಸೂಚಿ ಬೆಲೆಯ ಶೇ. 1 ರಿಂದ 2 ದರ ನಿಗದಿ ಮಾಡಲಾಗುತ್ತದೆ. ಉಪ ಚುನಾವಣೆ ಮುಗಿದ ಕೂಡಲೇ ಶುಲ್ಕ ಅಂತಿಮವಾಗಲಿದೆ.
ಆನ್ಲೈನ್ನಲ್ಲಿ ಅರ್ಜಿ
ಪರಿವರ್ತನೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ 2019ರಿಂದಲೇ ಜಾರಿಯಲ್ಲಿದೆ. ಆದರೂ ನಿಧಾನಗತಿ ವ್ಯವಸ್ಥೆಯನ್ನು ಸುಧಾರಿಸುವುದು ಸಾಧ್ಯವಾಗಿಲ್ಲ. ಈಗಲೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮುಂದುವರಿಸಲಾಗುತ್ತದೆ.
ತರಾತುರಿ ಏಕೆ?
ರಾಜ್ಯದಲ್ಲಿ 2022ಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ಆ ವೇಳೆಗೆ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಾನೂನಿನ ತೊಡಕು ಇರಬಾರದೆಂಬುದು ಸರ್ಕಾರದ ಉದ್ದೇಶವಾಗಿದೆ.
ದಾಖಲೆಗಳು ಸರಳ
ಪರಿವರ್ತನೆಗೆ ಅಗತ್ಯವಾಗಿ ಬೇಕಾಗುವ ಭೂಮಿ ಖಾತೆಯ ದಾಖಲೆ, ಮ್ಯುಟೇಷನ್, ಮೂಲ ಸೇಲ್ ಡೀಡ್, ಗಿಫ್ಟ್ ಡೀಡ್, ಪಾಪರ್ಟಿ ಟೈಟಲ್ ಡೀಡ್, ಎನ್ಒಸಿ, ತೆರಿಗೆ ಪಾವತಿಯ ದಾಖಲೆ, ಸರ್ವೆ ಮ್ಯಾಪ್, ಆರ್ಟಿಸಿ, ಹಾಲಿ ಹಾಗೂ ಮಾಜಿ ಮಾಲೀಕರ ದಾಖಲೆ ಇದ್ದರೆ ಸಾಕು. ಇದಕ್ಕಿಂತ ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ. ಉಳಿದಿದ್ದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು.
ಜಿಲ್ಲಾಧಿಕಾರಿಗಳಿಗೆ ಕಾಲಮಿತಿ
ಇಲ್ಲಿಯವರೆಗೆ ಭೂಮಿ ಪರಿವರ್ತನೆ ಮಾಡಿಕೊಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದೇ ಆಗಿದ್ದರೂ ಅದಕ್ಕೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಸೀಲ್ದಾರರು ದಾಖಲೆಗಳನ್ನು ಒದಗಿಸಬೇಕಿತ್ತು. ಲಂಚಾವತಾರದ ಹಾವಳಿಯಿಂದಾಗಿ 20 ರಿಂದ 30 ರೀತಿಯ ದಾಖಲೆಗಳನ್ನು ಪಡೆದುಕೊಳ್ಳುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದರು. ಆದರೆ, ಇನ್ನು ಮುಂದೆ, ವ್ಯವಸ್ಥೆ ಬದಲಾಗಲಿದ್ದು, ಜಿಲ್ಲಾಧಿಕಾರಿಗಳು ಇಡೀ ಜಿಲ್ಲೆಯ ಜಮೀನುಗಳಿಗೆ ಸಂಬಂಧಿಸಿದ ಮಾಹಿತಿ- ದಾಖಲೆ ಹೊಂದಿರುವುದು ಕಡ್ಡಾಯವಾಗಲಿದೆ.ಹೀಗಾಗಿ ಯಾವುದೇ ದಾಖಲೆಗಳಿಗಾಗಿ ಕೆಳ ಹಂತಕ್ಕೆ ಮಾಹಿತಿ ಕೋರದೆ ಮೂರು ದಿನಗಳಲ್ಲಿ ಭೂಪರಿವರ್ತನೆ ಆದೇಶ ನೀಡುವುದು ಸಾಧ್ಯವಾಗಲಿದೆ. ಯೋಜನಾ ಪ್ರಾಧಿಕಾರದ ದಾಖಲೆಗಳನ್ನು ಡಿಸಿ ಪರಿಶೀಲಿಸಬೇಕಾಗುತ್ತದೆ. ಪಿಟಿಸಿಎಲ್, ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸ್ವಾಧೀನ, ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಆಗಿದೆಯೇ ಎಂಬುದನ್ನೂ ಡಿಸಿಗಳು ಪರಿಶೀಲಿಸಬೇಕು. ಇದೆಲ್ಲದಕ್ಕೂ ಅನುಮತಿ ನೀಡುವವರು ಜಿಲ್ಲಾಧಿಕಾರಿಗಳಾಗಿರುತ್ತಾರೆ. ಅವರ ಬಳಿ ಈ ಎಲ್ಲ ದಾಖಲೆ ಇರುತ್ತವೆ. ಆದ್ದರಿಂದಲೇ ಅಲೆದಾಡಿಸುವಂತಿಲ್ಲ. 3 ದಿನದಲ್ಲಿ ಪರಿಶೀಲಿಸಿ ಪರಿವರ್ತನೆ ಆದೇಶ ಕೊಟ್ಟು ಕಳುಹಿಸಬೇಕು. ಅಂತಹ ವ್ಯವಸ್ಥೆ ಒಂದೇ ಬಾರಿ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ತರುವುದಕ್ಕೆ ವ್ಯವಸ್ಥೆ ಸಜ್ಜುಗೊಳಿಸುವ ಕೆಲಸ ಈಗ ನಡೆದಿದೆ.