

ಮಡಿಕೇರಿ:
ಪಶ್ಚಿಮಘಟ್ಟದ ಸೂಕ್ಷ್ಮ ವಲಯದಲ್ಲಿ ಬರುವ ಕೊಡಗಿನಲ್ಲಿ ಭೂ ಪರಿವರ್ತನೆಗೆ ಪರಿಸರ ಪ್ರಿಯರ ವಿರೋಧದ ನಡುವೆಯೇ ಈ ತನಕ ೩೧೬ ಪ್ರಕರಣಗಳಲ್ಲಿ ಒಂದು ಎಕರೆಗೆ ಮೇಲ್ಪಟ್ಟು ೧೧೦೭.೫೮ ಎಕರೆ ಜಾಗ ವಿವಿಧ ಉದ್ದೇಶಗಳಿಗಾಗಿ ಭೂ ಪರಿವರ್ತನೆಗೆ ಒಳಪಟ್ಟಿದೆ. ೩೬ ಪ್ರಕರಣಗಳಲ್ಲಿ ೧೦೭.೬ ಎಕರೆ ಜಾಗದ ಪರಿವರ್ತನೆಗಾಗಿ ಹೊಸ ಪ್ರಸ್ತಾವನೆಗಳು ಬಂದಿದೆ. ೨೦೧೮ರ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಾಕತಿಕ ವಿಕೋಪದ ನಂತರ ಕೆಲವೊಂದು ನಿಯಮಗಳನ್ನು ಹೇರಿದ ನಂತರವೂ ಭೂಪರಿವರ್ತನೆ ಮುಂದುವರಿದಿರುವುದು ಎಷ್ಟರ ಮಟ್ಟಿಗೆ ನಿಯಮಗಳ ಪಾಲನೆ ಆಗುತ್ತಿದೆ ಎನ್ನುವುದನ್ನು ಪ್ರಶ್ನಿಸುವಂತಿದೆ.
೨೦೧೮ರ ಆಗಸ್ಟ್‌ನಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೀಕರ ಪ್ರಾಕತಿಕ ದುರಂತ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿತ್ತು. ಇಲ್ಲಿಯ ಸೂಕ್ಷ್ಮ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿಯೇ ಅನಾಹುತಗಳಿಗೆ ಕಾರಣ ಎನ್ನುವ ವ್ಯಾಖ್ಯಾನ ಕೇಳಿ ಬಂದಿತ್ತು. ಈ ಬೆನ್ನಲ್ಲೇ ದುರಂತ ಸಂಭವಿಸಿದ್ದ ಸ್ಥಳಗಳ ಪರಿಶೀಲನೆ ನಡೆಸಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಕೊಡಗಿನಲ್ಲಿ ಭೂ ಪರಿವರ್ತನೆ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ೨೦೧೮ರ ನವೆಂಬರ್ ೨೩ರಂದು ಅಂದಿನ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು.
ಆಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮಾಡಿದ್ದ ಆದೇಶಕ್ಕೆ ಜಿಲ್ಲೆಯಲ್ಲಿ ಒಂದು ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಆದೇಶದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ ೧೫ರಿಂದ ೨೦ ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ ಭೂ ಪರಿವರ್ತನೆಗೆ ಅನುಮತಿಸಲು ೨೦೧೯ರ ಮೇ ೮ರಂದು ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದರಿಂದ ಪೆಟ್ರೋಲ್ ಬಂಕ್ ಸ್ಥಾಪನೆಯಂತಹ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಸಿಕ್ಕಿರಲಿಲ್ಲ.
ಮತ್ತೆ ಸರ್ಕಾರದ ಮುಂದೆ ಒತ್ತಡ ಮುಂದುವರಿಸಿದ್ದ ಆಗಿನ ಜನಪ್ರತಿನಿಧಿಗಳು ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆ ಪುನರಾರಂಭಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸುವಲ್ಲಿ ೨೦೨೦ರಲ್ಲಿ ಯಶಸ್ವಿಯಾಗಿದ್ದರು. ಸರ್ಕಾರದ ಈ ಆದೇಶದಿಂದ ಸ್ವಂತ ಕಷಿಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಇದರ ದುರ್ಬಳಕೆಯಿಂದ ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಮತ್ತೆ ಬಿರುಸುಗೊಳ್ಳುವ ಸೂಚನೆಯೂ ಸಿಕ್ಕಿತ್ತು. ಭತ್ತ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದರಿಂದ ಜಿಲ್ಲೆಯ ಒಟ್ಟಾರೆ ಪರಿಸರದ ಮೇಲೆ ವ್ಯತಿರ‌್ಯಿಕ್ತ ಪರಿಣಾಮ ಬೀರುವ ಬಗ್ಗೆ ಪರಿಸರವಾದಿಗಳ ಆತಂಕದ ಮಧ್ಯೆ ಮತ್ತೆ ಭೂ ಪರಿವರ್ತನೆ ನಿರಾತಂಕವಾಗಿ ಮುಂದುವರಿದಿದೆ.
ಕಂದಾಯ ಸಚಿವರು ಕೊಟ್ಟಿರುವ ಅಧಿಕೃತ ಮಾಹಿತಿ ಪ್ರಕಾರ ವಾಣಿಜ್ಯ ಉದ್ದೇಶಕ್ಕೆ ಅತ್ಯಂತ ಹೆಚ್ಚು ಅಂದರೆ ೧ ಎಕರೆಗೂ ಹೆಚ್ಚಿನ ಪ್ರಮಾಣದಲ್ಲಿ ೨೦೦ ಪ್ರಕರಣಗಳಲ್ಲಿ ೭೧೯.೩೫ ಎಕರೆ ಜಾಗ ಕೊಡಗಿನಲ್ಲಿ ಭೂ ಪರಿವರ್ತನೆ ಆಗಿದೆ. ವಸತಿ ಉದ್ದೇಶಕ್ಕೆ ೧೦೧ ಪ್ರಕರಣಗಳಲ್ಲಿ ೩೪೨.೬೧ ಎಕರೆ ಜಾಗ ಹಾಗೂ ಕೈಗಾರಿಕೆ ಉದ್ದೇಶಕ್ಕೆ ೧೫ ಪ್ರಕರಣಗಳಲ್ಲಿ ೪೫.೬೨ ಎಕರೆ ಜಾಗದ ಭೂ ಪರಿವರ್ತನೆ ಆಗಿದೆ. ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಳ್ಳುವಲ್ಲಿ ಮಡಿಕೇರಿ ತಾಲೂಕು ಮುಂದಿದೆ. ಇಲ್ಲಿ ೧ ಎಕರೆಗೂ ಹೆಚ್ಚಿನ ೫೦ ಪ್ರಕರಣಗಳಲ್ಲಿ ೨೨೯.೫೫ ಎಕರೆ ಜಾಗ ಭೂ ಪರಿವರ್ತನೆ ಆಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೩೪ ಪ್ರಕರಣಗಳಲ್ಲಿ ೧೦೫.೪೫ ಎಕರೆ, ವಿರಾಜಪೇಟೆ ತಾಲೂಕಿನಲ್ಲಿ ೪೧ ಪ್ರಕರಣಗಳಲ್ಲಿ ೧೧೯.೯೫ ಎಕರೆ, ಕುಶಾಲನಗರ ತಾಲೂಕಿನಲ್ಲಿ ೫೭ ಪ್ರಕರಣಗಳಲ್ಲಿ ೨೧೨.೪೫ ಎಕರೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧೮ ಪ್ರಕರಣಗಳಲ್ಲಿ ೫೧.೯೫ ಎಕರೆ ಜಮೀನು ಭೂ ಪರಿವರ್ತನೆ ಆಗಿದೆ.
ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಳ್ಳುವಲ್ಲಿ ಕುಶಾಲನಗರ ತಾಲೂಕು ಮುಂದಿದೆ. ಇಲ್ಲಿ ೨೩ ಪ್ರಕರಣಗಳಲ್ಲಿ ೧ ಎಕರೆಗೂ ಅಧಿಕ ಪ್ರಮಾಣದಲ್ಲಿ ೧೦೩.೧ ಎಕರೆ ಜಮೀನು ಪರಿವರ್ತನೆ ಆಗಿದೆ. ಮಡಿಕೇರಿ ತಾಲೂಕಿನಲ್ಲಿ ೨೩ ಪ್ರಕರಣಗಳಲ್ಲಿ ೭೯.೭೭ ಎಕರೆ, ಸೋಮವಾರಪೇಟೆಯಲ್ಲಿ ೩೧ ಪ್ರಕರಣಗಳಲ್ಲಿ ೯೨.೩ ಎಕರೆ, ವಿರಾಜಪೇಟೆಯಲ್ಲಿ ೧೧ ಪ್ರಕರಣಗಳಲ್ಲಿ ೨೮.೩೨ ಎಕರೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧೩ ಪ್ರಕರಣಗಳಲ್ಲಿ ೩೯.೧೨ ಎಕರೆ ಭೂ ಪರಿವರ್ತನೆ ಆಗಿದೆ.
ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆಯಲ್ಲೂ ಕುಶಾಲನಗರ ತಾಲೂಕು ಮುಂದಿದೆ. ಇಲ್ಲಿ ೮ ಪ್ರಕರಣಗಳಲ್ಲಿ ೧ ಎಕರೆಗೂ ಅಧಿಕ ವಿಸ್ತೀರ್ಣದ ೨೮.೩೨ ಎಕರೆ ಜಮೀನಿನ ಭೂ ಪರಿವರ್ತನೆ ಆಗಿದೆ. ಮಡಿಕೇರಿ ತಾಲೂಕಿನಲ್ಲಿ ೧ ಪ್ರಕರಣದಲ್ಲಿ ೧.೮೨ ಎಕರೆ, ಸೋಮವಾರಪೇಟೆ ತಾಲೂಕಿನಲ್ಲಿ ೨ ಪ್ರಕರಣದಲ್ಲಿ ೫.೭ ಎಕರೆ, ವಿರಾಜಪೇಟೆ ತಾಲೂಕಿನಲ್ಲಿ ೨ ಪ್ರಕರಣದಲ್ಲಿ ೯.೬೫ ಎಕರೆ ಹಾಗೂ ಪೊನ್ನಂಪೇಟೆಯಲ್ಲಿ ೫.೫೫ ಎಕರೆ ಭೂ ಪರಿವರ್ತನೆ ಆಗಿದೆ.
ಹೊಸದಾಗಿ ಭೂ ಪರಿವರ್ತನೆಗೆ ಸ್ವೀಕರಿಸಲಾಗಿರುವ ಪ್ರಸ್ತಾವನೆಗಳ ಪೈಕಿ ಕುಶಾಲನಗರ ತಾಲೂಕಿನದ್ದೇ ಹೆಚ್ಚು ಇದೆ. ಕುಶಾಲನಗರ ತಾಲೂಕಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ೧೩ ಪ್ರಕರಣಗಳಲ್ಲಿ ೧ ಎಕರೆಗೂ ಅಧಿಕ ವಿಸ್ತೀರ್ಣದ ೪೮.೬೪ ಎಕರೆ ಜಾಗದ ಭೂ ಪರಿವರ್ತನೆಗಾಗಿ ಪ್ರಸ್ತಾವನೆ ಬಂದಿದೆ. ಮಡಿಕೇರಿ ತಾಲೂಕಿನಲ್ಲಿ ೫ ಪ್ರಕರಣಗಳಲ್ಲಿ ೯.೫೫ ಎಕರೆ, ಸೋಮವಾರಪೇಟೆಯಲ್ಲಿ ೨ ಪ್ರಕರಣಗಳಲ್ಲಿ ೮.೭೨ ಎಕರೆ, ವಿರಾಜಪೇಟೆ ತಾಲೂಕಿನಲ್ಲಿ ೫ ಪ್ರಕರಣಗಳಲ್ಲಿ ೧೪.೬೦ ಎಕರೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೩ ಪ್ರಕರಣಗಳಲ್ಲಿ ೫.೩ ಎಕರೆ ಜಾಗದ ಭೂ ಪರಿವರ್ತನೆಗಾಗಿ ಪ್ರಸ್ತಾವನೆ ಬಂದಿದೆ.
ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗಾಗಿಯೂ ಕುಶಾಲನಗರ ತಾಲೂಕಿನಿಂದಲೇ ಹೆಚ್ಚು ಪ್ರಸ್ತಾವನೆಗಳು ಬಂದಿದೆ. ೧ ಎಕರೆಗಿಂತಲೂ ಅಧಿಕ ಪ್ರಮಣದ ೨ ಪ್ರಕರಣಗಳಲ್ಲಿ ೮.೯೭ ಎಕರೆ ಜಾಗದ ಭೂ ಪರಿವರ್ತನೆಗೆ ಪ್ರಸ್ತಾವನೆ ಸರ್ಕಾರದ ಮುಂದಿದೆ. ಮಡಿಕೇರಿ ತಾಲೂಕಿನಲ್ಲಿ ೨ ಪ್ರಕರಣಗಳಿದೆ ಸಂಬಂಧಿಸಿದ ೪.೪೧ ಎಕರೆ, ಸೋಮವಾರಪೇಟೆ ತಾಲೂಕಿನಲ್ಲಿ ೨ ಪ್ರಕರಣಗಳ ೩.೨೪ ಎಕರೆ, ವಿರಾಜಪೇಟೆ ತಾಲೂಕಿನಲ್ಲಿ ೧ ಪ್ರಕರಣದ ೨.೧೭ ಎಕರೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧ ಪ್ರರಕಣದ ೨ ಎಕರೆ ಜಾಗ ಭೂ ಪರಿವರ್ತನೆಗಾಗಿ ಕಾದಿದೆ. ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆಯ ಯಾವುದೇ ಪ್ರಸ್ತಾವನೆಗಳು ಇಲ್ಲ.
ಕೊಡಗಿನಲ್ಲಿ ಭೂಪರಿವರ್ತನೆಯ ಷರತ್ತುಗಳು: