

ಕೊಳ್ಳೇಗಾಲ: ಸತ್ತೇಗಾಲ ಗ್ರಾಮದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಕಿರು ಸೇತುವೆಯ ಬಳಿ ಎರಡು ಕಡೆಗಳಲ್ಲಿ ಮಣ್ಣು ಕುಸಿದಿದ್ದು, ವಾಹನ ಸವಾರರು ಅಪಘಾತಕ್ಕೀಡಾಗುವ ಸಂಭವವಿದೆ.
ತಾಲೂಕಿನ ಸತ್ತೇಗಾಲ ಗ್ರಾಮದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಪಾಸ್ ರಸ್ತೆ ನಿರ್ಮಿಸಿದೆ. ಎರಡ್ಮೂರು ತಿಂಗಳ ಹಿಂದೆಯಷ್ಟೆ ರಸ್ತೆ ಕಾಮಗಾರಿ ನಡೆದಿದ್ದು, ಈ ಮಾರ್ಗದಲ್ಲಿ ಸಿಗುವ ಕಿರು ಸೇತುವೆಯ ಎರಡು ಭಾಗದಲ್ಲಿ ಮಣ್ಣು ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸುಮಾರು 15 ಅಡಿಗೂ ಹೆಚ್ಚು ಗುಂಡಿ ನಿರ್ಮಾಣವಾಗಿದೆ.ಕಳೆದ 1 ವಾರದಿಂದ ಸುರಿದ ಮಳೆಗೆ ಮಣ್ಣು ಕುಸಿದು ಈ ಅವಾಂತರ ಸೃಷ್ಟಿಯಾಗಿದ್ದು, ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ. ಈ ಬೈಪಾಸ್ ರಸ್ತೆಯಲ್ಲಿ ಸಾವಿರಾರು ವಾಹನಗಳು ದಿನವಿಡಿ ಸಂಚರಿಸುತ್ತದೆ. ಯಾರಾದರೂ ಆಯತಪ್ಪಿ ಕುಸಿದಿರುವ ಮಣ್ಣಿನ ಮೇಲೆ ವಾಹನವನ್ನು ಚಲಾಯಿಸಿದರೆ ವಾಹನ ಸಹಿತ ಗುಂಡಿಯೊಳಗೆ ಬೀಳುತ್ತಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳು ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.