

| ಮೃತ್ಯುಂಜಯ ಕಪಗಲ್ ಬೆಂಗಳೂರು
ಬರ, ನೆರೆ, ಕರೊನಾ ನಂತರ ಮತ್ತೆ ನೆರೆ ಅಪ್ಪಳಿಸಿರುವ ಪರಿಣಾಮ ಸೊರಗಿದ ಬೊಕ್ಕಸಕ್ಕೆ ಶಕ್ತಿ ತುಂಬಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಇದರ ಭಾಗವಾಗಿ ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ಒತ್ತುವರಿ ಭೂಮಿಯನ್ನು ಹರಾಜು ಹಾಕಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಆ.10ರಂದು ಸಭೆ ನಡೆಸಲಾಗಿದೆ. ಸಭೆಯ ನಡಾವಳಿ ಪ್ರತಿ ವಿಜಯವಾಣಿಗೆ ಲಭ್ಯವಾಗಿವೆ.
ಕರೊನಾ ನಿರ್ವಹಣೆ, ನೆರೆ ಪರಿಹಾರ ಸೇರಿ ತುರ್ತು ಅಗತ್ಯದ ವೆಚ್ಚ, ವೇತನ ಸರಿದೂಗಿಸಬೇಕಿದೆ. ಇದರೊಂದಿಗೆ ಚಾಲ್ತಿ ಪ್ರಮುಖ ಅಭಿವೃದ್ಧಿ ಕಾರ್ಯಗಳು, ಬಜೆಟ್ ನಲ್ಲಿ ಪ್ರಸ್ತಾಪಿತ ಆಯ್ದ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಹಣ ಹೊಂದಿಸುವುದು ಕಠಿಣ ಸವಾಲಾಗಿದೆ. ವಿಶೇಷವಾಗಿ ನೀರಾವರಿ ಸೇರಿ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕಾದ ಮುಖ್ಯ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಬೇಕು. ಕರೊನಾ ಕಾರಣದಿಂದ ಮುಂದಕ್ಕೆ ಹಾಕಿದರೆ ರಾಜ್ಯಕ್ಕೂ ನಷ್ಟ ಹಾಗೂ ವೆಚ್ಚದ ದೃಷ್ಟಿಯಿಂದ ಅನಗತ್ಯ ಹೊರೆಯಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.
ಹರಾಜಿಗೆ ಸಚಿವರ ಅಸ್ತು: ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸಿದ ಜಮೀನು ಹರಾಜಿಗೆ ಕಂದಾಯ ಸಚಿವರು ಅಸ್ತು ಎಂದಿದ್ದಾರೆ. ಜಮೀನು ಮಾರಾಟ ಮಾಡಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಸರ್ಕಾರ ಉತ್ಸುಕವಾಗಿದೆ. ಎಚ್.ಡಿ. ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ತೆರವಾದ ಜಮೀನಿನ ಪೈಕಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿದ್ದು, ತೀವ್ರ ವಿರೋಧದಿಂದಾಗಿ ಕೈಬಿಟ್ಟಿದ್ದರು. ಆದರೆ ಸರ್ಕಾರಿ ಉದ್ದೇಶಿತ ಬಳಕೆಗೆ ಇದೇ ಜಮೀನಿನಲ್ಲಿ ಅಲ್ಪಸ್ವಲ್ಪ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತೆರವಾದ ಜಮೀನಿನಲ್ಲಿ ಬಿಎಂಟಿಸಿ ಸಹಿತ ಕೆಲವು ಸರ್ಕಾರಿ ಸಂಸ್ಥೆಗಳ ಉಪಯೋಗಕ್ಕೆ ಹಂಚಿಕೆ ಮಾಡಿದ್ದಾರೆ. ಇದೀಗ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ತೆರವು ಜಮೀನು ವಿಕ್ರಯಕ್ಕೆ ಸರ್ಕಾರ ಮೊರೆ ಹೋಗಿದೆ.
ರಾಜ್ಯದಲ್ಲಿ 11 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 35,000 ಒತ್ತುವರಿದಾರರಿಂದ 50,000 ಎಕರೆಗೂ ಹೆಚ್ಚು ಜಮೀನು ಒತ್ತುವರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಈಗಾಗಲೇ 12,500 ಎಕರೆಯನ್ನು ಸರ್ಕಾರ ವಶಕ್ಕೆ ಪಡೆದಿದೆ. ಇದರಲ್ಲಿಯೇ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಹಂಚಿದ ನಂತರವೂ ಉಳಿದದ್ದನ್ನು ಹರಾಜು ಮಾಡಿ ಬೊಕ್ಕಸ ತುಂಬಿಕೊಳ್ಳಲು ಸರ್ಕಾರ ಸಜ್ಜಾಗಿದೆ.
ಮುಖ್ಯ ಕಾರ್ಯದರ್ಶಿ ಪರಿಶೀಲನೆ: ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಒಡೆತನದ ಜಮೀನು ಹರಾಜು, ಗುತ್ತಿಗೆದಾರರಿಗೆ ಮಂಜೂರು ಸೇರಿ ಕೈಗೊಂಡ ಕ್ರಮಗಳನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಪರಿಶೀಲಿಸಿದ್ದಾರೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದ ಚರ್ಚೆ ಹಾಗೂ ಸೂಚನೆಗಳ ಪಾಲನೆಯನ್ನು ಪರಾಮಶಿಸಿದ್ದು, ಸರ್ಕಾರಿ ಜಮೀನುಗಳ ಮಾರಾಟ ಸಂಪನ್ಮೂಲ ಸಂಗ್ರಹದ ಮುಖ್ಯ ಭಾಗವಾಗಿದೆ. ತ್ವರಿತ ವಿಲೇವಾರಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಡಿಯೋ ಸಂವಾದದಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ಡಾ.ಎಚ್.ಆರ್.ಮಹದೇವ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಗರ ಜಿಲ್ಲೆ ಅಪರ ಜಿಲ್ಲಾಧಿಕಾರಿ ಶ್ರೀರೂಪಾ, ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ.ಡಿ.ಕೆ.ಪ್ರಭುರಾಜ್ ಮತ್ತು ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಪಾಲ್ಗೊಂಡಿದ್ದರು.
ಒತ್ತುವರಿ ತೆರವು ಹೆಸರಿನಲ್ಲಿ ಬಡವರ ಉಳುಮೆ ಭೂಮಿ ಕಿತ್ತುಕೊಂಡ ಸರ್ಕಾರ ಉಳ್ಳವರಿಗೆ ಮಾರಾಟ ಮಾಡಲು ಹೊರಟಿದೆ. ತೀವ್ರ ಚಳವಳಿಗೆ ಮಣಿದು ಹಿಂದಿನ ಸರ್ಕಾರ ಹರಾಜು ಕೈಬಿಟ್ಟಿತ್ತು. ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ತೆರವು ಜಮೀನು ಹರಾಜಿಗೆ ಬಿಜೆಪಿ ಸರ್ಕಾರ ಮುಂದಾಗಿರುವುದು ಸರಿಯಲ್ಲ. | ಎನ್.ವೆಂಕಟಾಚಲಯ್ಯ ರಾಜ್ಯ ಉಪಾಧ್ಯಕ್ಷ, ಕೆಪಿಆರ್ ಎಸ್.