

ಮೇಲುಕೋಟೆ: ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹಾಗೂ ಯದುಶೈಲ ಎಜುಕೇಶನ್ ಸೊಸೈಟಿಗೆ ಸೇರಿದ ಜಮೀನುಗಳ ಸಂಪೂರ್ಣ ವಿಸ್ತೀರ್ಣ ಗುರುತಿಸಲಾಯಿತು.
ನೀಲಗಿರಿ ಮರಗಳು ಹೆಚ್ಚು ಬೆಳೆದ ರಸ್ತೆಬದಿಯ ಜಮೀನು ಸರ್ಕಾರಿಗೆ ಶಾಲೆಗೆ ಸೇರಿದ್ದರೆ, ಹಿಂಭಾಗದ ಜಮೀನು ಯದುಶೈಲ ಪ್ರೌಢಶಾಲೆಗೆ ಸೇರಿದೆ ಎಂಬುದು ಜಂಟಿ ಸರ್ವೇಯಲ್ಲಿ ಮತ್ತೊಮ್ಮೆ ಖಚಿತವಾಯಿತು.
ನ್ಯಾಯಾಲಯ ಆದೇಶದಂತೆ ಬುಧವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪಾಂಡವಪುರ ತಾಲೂಕು ಸರ್ವೇಯರ್ ಭಾಸ್ಕರ್, ಯದುಶೈಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ ನರಸಿಂಹೇಗೌಡ ಮತ್ತು ಟ್ರಸ್ಟಿಗಳು, ಪ್ರತಿವಾದಿಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಸದಸ್ಯ ರಮೇಶ್ ಮತ್ತವರ ಕಡೆಯವರಿಗೆ ನ್ಯಾಯಾಲಯದ ಆದೇಶದ ಮಾಹಿತಿ ನೀಡಿ ಜಮೀನುಗಳನ್ನು ಅಳತೆ ಮಾಡುವ ಕಾರ್ಯ ಆರಂಭಿಸಿದರು. ಎರಡೂ ಶಾಲೆಗಳಿಗೆ ಸೇರಿದ ಜಮೀನುಗಳ ಸಂಪೂರ್ಣ ಗಡಿ ಗುರುತಿಸುವ ಕಾರ್ಯ ನಡೆಸಿದರು.
ಅಳತೆ ಮಾಡಿ ವಿಸ್ತೀರ್ಣ ಗುರುತಿಸುವ ಕಾರ್ಯ ಮುಕ್ತಾಯಗೊಳಿಸಿದ ತಾಲೂಕು ಸರ್ವೇಯರ್ ಮಹಜರ್‌ಗೆ ವಾದಿ ಮತ್ತು ಪ್ರತಿವಾದಿ ಹಾಗೂ ಗ್ರಾಮಸ್ಥರು ಸಹಿ ಮಾಡಲು ಕೋರಿದಾಗ ವಾದಿ ಯದುಶೈಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಮಹಜರ್‌ಗೆ ಸಹಿ ಹಾಕಲು ನಿರಾಕರಿಸಿದರು. ಪ್ರತಿವಾದಿ ಮುಖ್ಯಶಿಕ್ಷಕ ಸಂತಾನರಾಮನ್, ಹಿರಿಯ ಸಹಶಿಕ್ಷಕಿ ಜಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯ ರಮೇಶ್, ಸಿಆರ್‌ಪಿ ಬೆಟ್ಟಸ್ವಾಮಿಗೌಡ, ಹಿರಿಯ ವಿದ್ಯಾರ್ಥಿಗಳಾದ ಈಶಮುರಳಿ, ಅಹೋಬಿಲಮಠದ ಶಶಿಕುಮಾರ್, ಕೆ.ಎನ್ ಸುಬ್ರಮಣ್ಯ, ಸಿದ್ದರಾಮು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸರ್ಕಾರದ ಪರವಾಗಿ ಸಹಿ ಮಾಡಿದರು. ವಾದಿ ನರಸಿಂಹೇಗೌಡ ಮತ್ತವರ ಟ್ರಸ್ಟಿಗಳ ತಂಡ ಸಹಿ ಮಾಡಲು ನಿರಾಕರಿಸಿದ್ದನ್ನು ದಾಖಲಿಸಿಕೊಂಡ ಸರ್ವೇಯರ್ ಸ್ಕೆಚ್ ಕಾಪಿ ಮತ್ತು ಮಹಜರ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿ ತೆರಳಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಹಿರಿಯ ವಿದ್ಯಾರ್ಥಿ, ಸಾಮಾಜಿಕ ಹೋರಾಟಗಾರ ಈಶಮುರುಳಿ, ಸರ್ವೇ ಕಾರ್ಯದಲ್ಲಿ ಸರ್ಕಾರಿ ಶಾಲೆಗೆ ಸೇರಿದ ಜಾಗದಲ್ಲೇ ಹೆಚ್ಚು ನೀಲಗಿರಿ ಮರಗಳಿರುವುದು ಕಂಡು ಬಂದಿದೆ. ಸರ್ಕಾರಿ ಶಾಲೆ ಹಾಗೂ ಇತರ ಇಲಾಖೆಗೆ ಸೇರಿದ ಜಮೀನಿನಲ್ಲಿ ಬೆಳೆದ ನೀಲಗಿರಿಮರಗಳನ್ನು ಶ್ರೀಯದುಶೈಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ.ಬಿ ನರಸಿಂಹೇಗೌಡ ಈ ಜಾಗವೂ ನಮಗೇ ಸೇರಿದ್ದು ಎಂದು ಹೇಳುತ್ತಾ ಹಲವು ಸಲ ಮರಕಡಿದು ಸಾಗಿಸಿದ್ದಾರೆ. 2018ರಲ್ಲಿ ಶಾಲೆಗೆ ಬೇಸಿಗೆ ರಜೆ ಇದ್ದಾಗ ಯದುಶೈಲ ಎಜುಕೇಶನ್ ಸೊಸೈಟಿ ಮರಕಡಿಯುತ್ತಿದ್ದಾಗ ಮುಖ್ಯಶಿಕ್ಷಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಪರಿಣಾಮ ಸರ್ಕಾರಿ ಶಾಲಾ ಮೈದಾನದಲ್ಲಿ ಮರ ಕಡಿದ ಆರೋಪದಲ್ಲಿ ಸೊಸೈಟಿಯ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾನೂನಿನಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದ ಆದೇಶಕ್ಕೆ ಅಗೌರವ: ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಜಂಟಿ ಸರ್ವೇ ಕಾರ್ಯ ನಡೆದಿದ್ದರೂ ಯದುಶೈಲ ಪ್ರೌಢಶಾಲೆ ಕಾರ್ಯದರ್ಶಿ ನರಸಿಂಹೇಗೌಡ ಮಹಜರ್‌ಗೆ ಸಹಿ ಮಾಡದೆ ತಿರಸ್ಕರಿಸಿದ್ದಾರೆ. ಇದು ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರುವ ನಡೆಯಾಗಿದೆ ಎಂದಿರುವ ಸುಬ್ರಮಣ್ಯ ಮತ್ತು ಈಶಮುರಳಿ ಸರ್ವೇ ಕಾರ್ಯದ ವೇಳೆ ಸರ್ಕಾರದ ಆಸ್ತಿ ಉಳಿಸಲು ಮುಂದಾಗಿರುವ ಸರ್ಕಾರಿ ಶಾಲೆ ಮುಖ್ಯಶಿಕ್ಷಕರು ಹಾಗೂ ಸಮಾಜದಲ್ಲಿ ತಮ್ಮದೇ ಸ್ಥಾನ ಪಡೆದಿರುವ ಹಿರಿಯ ವಿದ್ಯಾರ್ಥಿಗಳ ಬಗ್ಗೆ ಅಸಭ್ಯವಾದ ಮಾತುಗಳನ್ನಾಡಿದ್ದಾರೆ. ಸರ್ಕಾರಿ ಶಾಲೆ ಜಮೀನಿನಲ್ಲಿ ಬೆಳೆದ ಲಕ್ಷಾಂತರ ರೂ. ಮೌಲ್ಯದ ನೀಲಗಿರಿಮರಗಳನ್ನು ಹಲವು ಸಲ ಕಡಿದು ಸಾಗಿಸಿದ ಮೌಲ್ಯವನ್ನು ಅರಣ್ಯ ಇಲಾಖೆಯ ವರದಿಯಂತೆ ಶಾಲಾಭಿವೃದ್ಧಿಗೆ ನೀಡುವಂತೆ ಮಾಡಲು ಹೋರಾಡುತ್ತೇವೆ ಎಂದಿದ್ದಾರೆ.