

ಮಂಡ್ಯ: ಮದ್ದೂರಿನ ಕೆಇಬಿ ಎದುರಿನ ತಮಿಳು ಕಾಲನಿ ಜಾಗವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರಮಿಕ ನಿವಾಸಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರೂ ಸಹ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಸರ್ಕಾರ ಸ್ಪಂದಿಸದೆ ಮೌನ ವಹಿಸಿದೆ. ಸ್ವಚ್ಛತೆ ಕೆಲಸ ನಿರ್ವಹಿಸಿ ದುಡಿದು ಬದುಕುವ ಜನತೆಗೆ ವಾಸಕ್ಕೊಂದು ಸೂರಿಲ್ಲದಂತಾಗಿದೆ. ಎಲ್ಲರಂತೆ ನಮಗೆ ಬದುಕುವ ಹಕ್ಕು ಇಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಮದ್ದೂರಿನ ಕೆಇಬಿ ಮುಂಭಾಗದ ತಮಿಳು ಕಾಲನಿ ಪ್ರದೇಶವನ್ನು 57 ವರ್ಷದ ಹಿಂದೆ ಸ್ಲಂ ಎಂದು ಘೋಷಿತವಾಗಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಬಡ ಜನರ ಸಮಸ್ಯೆ ಬಗ್ಗೆ ನಿರ್ಲಕ್ಷೃ ವಹಿಸಿದ್ದಾರೆ. ಶ್ರಮಿಕ ನಿವಾಸಿಗಳು ವಾಸಿಸುತ್ತಿರುವ ಪ್ರದೇಶವನ್ನು ಪ್ರದೇಶವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡಬೇಕು. ಕಾಲನಿಯ 114 ಕುಟುಂಬಗಳನ್ನು ಸಮೀಕ್ಷೆ ಮಾಡಿ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು, ಉಮಾ, ಪುಟ್ಟಮ್ಮ, ಮಂಗಳಾ, ಕುಮಾರಿ, ವೀರಮ್ಮ, ರೂಪಾ ಇತರರಿದ್ದರು.