

ಮಂಡ್ಯ: ಮದ್ದೂರಿನ ತಮಿಳು ಕಾಲನಿಯಲ್ಲಿ 114 ನಿವಾಸಿಗಳೂ ವಾಸಿಸುತ್ತಿರುವ ಜಾಗ ಸ್ಲಂ ನಿವಾಸಿಗಳದ್ದು ಎಂದು ಈಗಾಗಲೇ ಅಧಿಕಾರಿಗಳು ಘೋಷಿಸಿದ್ದಾರೆ. ಅಂತೆಯೇ ವಸತಿ ಪ್ರದೇಶದ ಪಕ್ಕದಲ್ಲಿರುವ ಜಮೀನು, ಮಸೀದಿ, ವಕ್ಫ್ ಬೋರ್ಡ್ ಅಥವಾ ಶಾಲೆಗೂ ಯಾವುದೇ ಸಂಬಂಧವಾಗಲಿ, ಸಮಸ್ಯೆಯಾಗಲೀ ಇಲ್ಲದಿದ್ದದರೂ ಮದ್ದೂರಿನ ವಕ್ಫ್ ಮಂಡಳಿ ಹಾಗೂ ಮಸೀದಿ ಆಡಳಿತ ಮಂಡಳಿ ಅನ್ಯಾಯಯುತವಾಗಿ ಒತ್ತುವರಿ ನಡೆಸುವ ಪ್ರಯತ್ನ ಮಾಡುತ್ತಿದೆ ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯಕಾರ್ಯದರ್ಶಿ ಎಂ.ಸಿದ್ದರಾಜು ಆರೋಪಿಸಿದರು.
ತಮಿಳು ಸ್ಲಂ ನಿವಾಸಿಗಳಿರುವ ಪ್ರದೇಶದ ಎಲ್ಲ ಜಮೀನುಗಳೂ ಕೂಡ ಪ್ರತ್ಯೇಕವಾಗಿಯೇ ಗುರುತಿಸಲ್ಪಟ್ಟಿವೆ. ಇಲ್ಲಿನ ಜಮೀನುಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸರ್ವೆ ನಡೆಸಿ ಚೆಕ್‌ಬಂದಿಗಳನ್ನು ಗುರುತಿಸಿ ಖಚಿತಪಡಿಸಿದ್ದಾರೆ. ಆದರೂ ಶ್ರಮಿಕ ನಗರ ನಿವಾಸಿಗಳಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಬಲವಂತ ಮತ್ತು ಅನಧಿಕೃತವಾಗಿ ಸ್ಲಂ ಜನರ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ವಸತಿ ವಂಚಿತರಿಗೆ ಮನೆ ಕಟ್ಟಿಕೊಡಲು ಸ್ಲಂ ಬೋರ್ಡ್‌ಗೆ ಹಸ್ತಾಂತರ ಆಗಬೇಕಿದ್ದ ಭೂಮಿಯನ್ನು ಅಧಿಕಾರಿಗಳ ಆದೇಶಕ್ಕೆ ವಿರುದ್ಧವಾಗಿ ತಡೆಹಿಡಿದು ಸಮಸ್ಯೆ ಮಾಡಲಾಗುತ್ತಿದೆ. ಇದು ಅನಗತ್ಯವಾದ ಸಂಘರ್ಷದ ವಾತಾವರಣಕ್ಕೆ ದಾರಿ ಮಾಡಿಕೊಡುತ್ತಿದೆ. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಸಂಪೂರ್ಣ ಶಾಂತಿಯುತವಾಗಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ನಮಗೆ ಯಾವುದೇ ಕಾರಣಕ್ಕೂ ಸಂಘರ್ಷ ನಡೆಸುವ ಅಥವಾ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಸಮಸ್ಯೆಯನ್ನು ಮುಂದೊಯ್ಯಲು ಇಷ್ಟವಿಲ್ಲ. ಆದ್ದರಿಂದ ಅಶಾಂತಿ ಉಂಟಾಗದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಮುಂದಾಗಬೇಕು. ಅಲ್ಲಿಯವರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡರಾದ ನಗರಕೆರೆ ಜಗದೀಶ್, ವೈದುನ, ಸೆಲ್ವಿ, ಲತಾ ಇದ್ದರು.