ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿ ಸೂಚನೆ: ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾಹಿತಿ

1 (5)
Published on

ಮಂಡ್ಯ: ಮದ್ದೂರು ತಮಿಳು ಕಾಲನಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸುವುದರ ಜತೆಗೆ ಸರ್ವೆ ನಡೆಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಐದು ದಿನ ನಿರಂತರವಾಗಿ ನಡೆಸಿದ ಅನಿರ್ದಿಷ್ಟಾವಧಿ ಧರಣಿಗೆ ಜಯ ಲಭಿಸಿದೆ. ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.
ಹೋರಾಟಗಾರರನ್ನು ಕರೆದು ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಕೂಡಲೇ ತಮಿಳು ಕಾಲನಿಯನ್ನು ಸರ್ವೆ ನಡೆಸಿ, ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿ, ಅಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮದ್ದೂರು ಪಟ್ಟಣದ ಕೆಇಬಿ ಕಚೇರಿ ಮುಂಭಾಗದಲ್ಲಿರುವ ತಮಿಳು ಕಾಲನಿಯಲ್ಲಿ ಸುಮಾರು 70 ವರ್ಷದಿಂದ 114 ಕುಟುಂಬಗಳು ವಾಸವಿದ್ದು, ಅವರ ಹೆಸರಿನಲ್ಲಿ ಯಾವ ದಾಖಲೆಗಳು ಇರಲಿಲ್ಲ. ಈ ಕಾರಣದಿಂದ ಪಟ್ಟಭದ್ರ ಹಿತಾಸಕ್ತಿಗಳು ಆ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದೆವು. ನಮ್ಮ ನ್ಯಾಯಯುತ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಎಡಿಸಿ ಡಾ. ಎಚ್.ಎಲ್.ನಾಗರಾಜು ಅವರನ್ನು ಅಭಿನಂದಿಸುತ್ತೇವೆ ಎಂದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಸರ್ಕಾರಿ ಜಾಗಗಳಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳ ಸ್ಥಳಕ್ಕೆ ಆರ್.ಟಿ.ಸಿ. ಬದಲಾವಣೆಯ ಕೆಲಸ ತುರ್ತು ಆಗಬೇಕಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಿಸುವ ಸರ್ವೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ವೈದುನ, ಉಮಾ, ಚಂದ್ರಶೇಖರ್, ರೂಪಾ, ಲತಾ, ಚಲುವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net