

ರಾಯಚೂರು: ರೈತರಿಗೆ ಮಾರಕವಾಗಿರುವ ಸರ್ಕಾರ 2016ರ ಭೂ ತಿದ್ದುಪಡಿ ಕಾಯ್ದೆ ಕೈಬಿಡುವಂತೆ ಒತ್ತಾಯಿಸಿ ವಸತಿ ಮತ್ತು ಭೂಮಿ ಹಕ್ಕು ಹೋರಾಟ ಸಮಿತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಾಯ್ದೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಂಡವಾಳ ಶಾಹಿಗಳಿಗೆ ಗುತ್ತಿಗೆ ರೂಪದಲ್ಲಿ ಕೃಷಿ ಭೂಮಿ ಕೊಟ್ಟು ರೈತರನ್ನು ಬೀದಿ ಪಾಲು ಮಾಡುವ ಹುನ್ನಾರ ಈ ತಿದ್ದುಪಡಿಯಲ್ಲಿ ಅಡಗಿದೆ. ಇದು ರೈತರಿಗೆ ಅಪಾಯಕಾರಿಯಾದ ಕಾಯ್ದೆಯಾಗಲಿದೆ ಎಂದು ದೂರಿದರು.
ಸರ್ಕಾರಿ ಭೂಮಿಯನ್ನು ಸಮರ್ಪಕವಾಗಿ ಸರ್ವೇ ಮಾಡಿ ಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಭೂ ರಹಿತರಿಗೆ ಭೂಮಿ ಹಂಚಿಕೆ ಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಭೂ ರಹಿತರು ಜೀತದಾಳುಗಳಾಗಿ ಬದುಕುವಂತಾಗಿದೆ. ಕಾಯ್ದೆ ಜಾರಿಯಿಂದ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಭೂಮಿ ಇಲ್ಲದಂತಾಗಲಿದೆ. ರೈತರು ಬಂಡವಾಳಶಾಹಿಗಳಿಗೆ ಭೂಮಿ ನೀಡಿ ಅವರಲ್ಲಿ ಕೂಲಿಗಾಗಿ ದುಡಿಯುವ ದಿನಗಳು ಬರಲಿದ್ದು, ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ಮಾರೆಪ್ಪ ಹರವಿ, ಬೂದೆಯ್ಯಸ್ವಾಮಿ, ರಾಮರೆಡ್ಡಿ, ಆಂಜಿನಯ್ಯ ಕುರುಬದೊಡ್ಡಿ, ಮಲ್ಲನಗೌಡ, ಸುರೇಶ, ಮಲ್ಲಮ್ಮ ಹಾಗೂ ಇತರರಿದ್ದರು.