

ಜಿ.ನಾಗರಾಜ್ ಬೂದಿಕೋಟೆ
ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರದ ನೂರಾರು ಎಕರೆ ಗೋಮಾಳ ಭೂಮಿಯನ್ನು ಭೂಗಳ್ಳರು ನುಂಗಲು ಮರ ಗಿಡಗಳನ್ನು ಕಟಾವು ಮಾಡಿ ಭೂಮಿಯನ್ನು ಸಮತಟ್ಟು ಮಾಡಲು ಮುಂದಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಅಪಾರ ಬೆಲೆ ಬಾಳುವ ಭೂಮಿ ಪರರ ಪಾಲಾಗುತ್ತಿದೆ.
ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿ ವ್ಯಾಪ್ತಿಗೆ ಒಳಪಡುವ ವರದಾಪುರ ಗ್ರಾಮದ ಸರ್ವೇ ನಂಬರ್ 9 ರಲ್ಲಿ 142 ಎಕರೆ ಗೋಮಾಳ ಭೂಮಿ ಇದ್ದು, ಹತ್ತಾರು ವರ್ಷಗಳಿಂದ ಬೆಳೆದಿರುವ ಹಾಗೂ ಸಾವಿರಾರು ರೂ. ಬೆಲೆ ಬಾಳುವ ಮರಗಿಡಗಳನ್ನು ಬತ್ಲಾವೂರು, ಬಾದಗುಟ್ಲಹಳ್ಳಿ, ತಣಿಮಡಗು ಸುತ್ತ ಮುತ್ತಲಿನ ಗ್ರಾಮಗಳ ಭೂಗಳ್ಳರು ಸೇರಿ ಆಂಧ್ರ ಮೂಲದವರು ಕಟಾವು ಮಾಡಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ರಾತ್ರೋರಾತ್ರಿ ಭೂಮಿಯನ್ನು ಹಸನು ಮಾಡಿ ಸರ್ಕಾರಿ ಗೋಮಾಳ ಭೂಮಿ ಒತ್ತುವರಿ ಮಾಡಿಕೊಳ್ಳಲು ಭೂಗಳ್ಳರು ಮುಂದಾಗಿದ್ದಾರೆ. ಹೀಗೆ ಒತ್ತುವರಿ ಮಾಡಿಕೊಂಡಿರುವಂತಹ ಭೂಮಿಯಲ್ಲಿ ಅನಧಿಕೃತವಾಗಿ ಉಳುಮೆ ಮಾಡಿ ಕಾಟಾಚಾರಕ್ಕೆ ಹುರುಳಿ, ಜೋಳ ಇತ್ಯಾದಿಗಳನ್ನು ಬಿತ್ತನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳಿಯ ಗ್ರಾಮಸ್ಥರು ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಗಳ ಬೆಂಬಲವಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾತ್ರಿ ಕಾರ್ಯಾಚರಣೆ: ಸರ್ಕಾರ ಗಡಿಭಾಗದ ಗ್ರಾಮಗಳ ಜಾನುವಾರುಗಳನ್ನು ಮೇಯಿಸಲು 142 ಎಕರೆ ಭೂಮಿ ಮೀಸಲಿಡಲಾಗಿದೆ. ಭೂಮಿಯ ಬೆಲೆ ಗಗನಕ್ಕೇರುತ್ತಿದ್ದಂತೆ ಇದೇ ಗೋಮಾಳವನ್ನು ಗಡಿಭಾಗದ ಕರ್ನಾಟಕದ ಜನತೆಯ ಜತೆಗೆ ಆಂಧ್ರದ ಭೂಗಳ್ಳರ ಕಣ್ಣು ಬಿದ್ದಿದೆ. ಮುಂದೆ ಈ ಭೂಮಿ ವಶಪಡಿಸಿಕೊಂಡರೆ ಕೋಟ್ಯಾಂತರ ರೂ.ಗಳಿಗೆ ಮಾರಾಟ ಮಾಡಬಹುದು ಎಂಬ ಕಾರಣಕ್ಕೆ ಸರ್ಕಾರದ ಭೂಮಿಯನ್ನು ಭೂಗಳ್ಳರು ರಾತ್ರೋರಾತ್ರಿ ಕಬಳಿಸಲು ಮುಂದಾಗುತ್ತಿದ್ದಾರೆ.
ಪರಿಸರಕ್ಕೆ ಧಕ್ಕೆ: ಗೋಮಾಳದಲ್ಲಿಇರುವ ಬೆಲೆ ಬಾಳುವ ಮರಗಳನ್ನು ರಾತ್ರೋರಾತ್ರಿ ಕಡಿದು, ಜೆಸಿಬಿಗಳ ಸಹಾಯದಿಂದ ಭೂಮಿಯಲ್ಲಿ ಇರುವ ಮರದ ಬುಡ ಸೇರಿದಂತೆ ಕಲ್ಲು ಬಂಡೆಗಳನ್ನು ತೆಗೆಯುವ ಮೂಲಕ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರದ ಭೂಮಿಯಲ್ಲಿ ಇರುವಂತಹ ಮರಗಿಡಗಳನ್ನು ನಾಶ ಮಾಡುವುದರ ಜತೆಗೆ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.
ನಕಲಿ ದಾಖಲೆ ಸೃಷ್ಟಿ: ತಾಪಂ ಮಾಜಿ ಸದಸ್ಯರೊಬ್ಬರು ಹೊರ ರಾಜ್ಯದವರಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಂದ ಎಕರೆಗೆ ತಲಾ 5 ಲಕ್ಷ ರೂ.ಗಳಂತೆ ವಸೂಲಿ ಮಾಡಿ ಗೋಮಾಳ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಡುತ್ತೇನೆ ಎಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪವೂ ಇದೆ. ಗ್ರಾಮಸ್ಥರೇ ಹೇಳುವ ಪ್ರಕಾರ ಸರ್ಕಾರಿ ಗೋಮಾಳ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಪ್ರಯತ್ನಿಸಿ, ಈಗಾಗಲೇ ಜೈಲು ಶಿಕ್ಷೆ ಅನುಭವಿಸಿದ ಕೆಲವರು ಶ್ರೀಮಂತರಿಂದ ಲಕ್ಷಾಂತರ ರೂ.ಗಳನ್ನು ವಸೂಲಿ ಗೋಮಾಳ ಭೂಮಿಯನ್ನು ಅವರುಗಳ ಹೆಸರಿಗೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಭೂಗಳ್ಳರಿಂದ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಿ ಸುತ್ತಮುತ್ತಲ ಗ್ರಾಮಸ್ಥರ ಜಾನುವಾರುಗಳ ಸಾಕಣೆಗೆ ಅನುಕೂಲ ಮಾಡಿಕೊಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಸೇರಿದ ಹಾಗೂ ಗೋವುಗಳ ಮೇವಿಗೆ ಮೀಸಲಿಟ್ಟಿರುವ ಭೂಮಿಯನ್ನು ಕೆಲ ಪ್ರಭಾವಿಗಳು ಹಾಗೂ ಭೂಗಳ್ಳರು ಅಕ್ರಮವಾಗಿ ಒತ್ತುವರಿಗೆ ಮುಂದಾಗಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವಾಗುವುದರ ಜತೆಗೆ ಮುಂದೆ ರಾಸುಗಳಿಗೆ ಮೇವಿಗೆ ಭೂಮಿ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಬಹುದು. ಹಾಗಾಗಿ ಗೋಮಾಳವನ್ನು ಒತ್ತುವರಿದಾರರಿಂದ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಬೇಕು. - ಮುರುಗೇಶ್ ಬತ್ಲಾವೂರು ನಿವಾಸಿ 142 ಎಕರೆ ಭೂಮಿಯನ್ನು ಸರ್ಕಾರ ರಾಸುಗಳಿಗೆ ಮೀಸಲಿಟ್ಟಿರುವ ಗೋಮಾಳವನ್ನು ಕೆಲವರು ರಾತ್ರೋರಾತ್ರಿ ಮರಗಿಡಗಳನ್ನು ಕಟಾವು ಮಾಡಿ ಜೆಸಿಬಿ ಬಳಸಿ ಕಲ್ಲು ಬಂಡೆಗಳನ್ನು ತೆರವು ಮಾಡಿ ಹಸನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಮುಂದೆ ಇದೇ ಭೂಮಿಗೆ ಕೋಟ್ಯಾಂತರ ರೂ ಬೆಲೆ ಬರುವ ಸಾಧ್ಯತೆ ಇದ್ದು, ಸಂಬಂಧಟ್ಟ ಅಧಿಕಾರಿಗಳು ಭೂಮಿಯನ್ನು ರಕ್ಷಿಸಲು ಮುಂದಾಗಿ ಭೂಗಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. - ವೆಂಕಟೇಶ್ ಬತ್ಲಾವೂರು ನಿವಾಸಿ ಸರ್ಕಾರದ ಗೋಮಾಳ ಭೂಮಿಯನ್ನು ರಕ್ಷಿಸಬೇಕಿದ್ದು, ಸಂಬಂಧಪಟ್ಟ ತಹಸೀಲಾರ್ರಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗುತ್ತದೆ. ನಂತರ ಸೂಕ್ತ ಕ್ರಮ ಜರುಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. - ಡಾ.ಎಂ.ಆರ್ ರವಿ ಜಿಲ್ಲಾಧಿಕಾರಿ ಕೋಲಾರ