

ಮೈಸೂರು: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ-275 ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಭೂ ವಿಶೇಷಾಧಿಕಾರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮೈಸೂರು-ಕುಶಾಲನಗರ ಹೆದ್ದಾರಿ ನಿರ್ಮಾಣ 4130 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಕುಶಾಲನಗರದ ತನಕ 92 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ಹೆದ್ದಾರಿ ನಿರ್ಮಾಣ ಸಂಬಂಧ ಭೂಸ್ವಾಧೀನಕ್ಕೆ 1100 ಕೋಟಿ ರೂ. ಆಗಲಿದ್ದು, ಈಗಾಗಲೇ 547 ಹೆಕ್ಟೇರ್ ಪ್ರದೇಶದಲ್ಲಿ 290 ಹೆಕ್ಟೇರ್ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಉಳಿದ ಭೂಮಿಯು ಹಸ್ತಾಂತರವಾಗಲಿದೆ. ಈಗಾಗಲೇ 177 ರೈತರಿಗೆ ಪರಿಹಾರ ನೀಡಲಾಗಿದೆ. ಭೂ ವ್ಯಾಜ್ಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ಭೂಮಿ ಹಸ್ತಾಂತರ ಮಾಡಲಾಗುವುದು ಎಂದರು.
ಮೈಸೂರು-ಕುಶಾಲನಗರ ನಡುವೆ ಐದು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯಲಿದ್ದು, ಎರಡು ಮತ್ತು ನಾಲ್ಕರಲ್ಲಿ ಭೂಮಿ ಹಸ್ತಾಂತರವಾಗಿರುವ ಕಾರಣ ಕಾಮಗಾರಿ ಶುರುವಾಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಮಾತನಾಡಿ, ರಾಮನಗರದಲ್ಲಿರುವ ಎನ್‌ಎಚ್ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರ ಮಾಡಲಾಗುವುದು. ಈಗಾಗಲೇ ಭೂ ಪರಿಹಾರ ನೀಡಲಾಗಿದೆ. ಕೆಲವು ಪ್ರಕರಣಗಳು ಇತ್ಯರ್ಥವಾಗದ ಕಾರಣ ನಾವು ಬಿಡುಗಡೆ ಮಾಡಿಲ್ಲ ಎಂದರು.
ಕೆಲವು ಕಡೆಗಳಲ್ಲಿ ಭೂಮಿ ಬಿಟ್ಟುಕೊಡಲು ವಿರೋಧ ಮಾಡಿದ್ದಾರೆ. ಒಂದು ಊರಿನ ಭೂಮಿಗೆ ಒಂದು ಬೆಲೆ, ಮತ್ತೊಂದು ಊರಿನ ಭೂಮಿಗೆ ಬೇರೆ ಬೆಲೆಯಾಗಿದೆ. ನಮಗೂ ಅಷ್ಟೇ ಕೊಡುವಂತೆ ಕೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಡಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಈ ರೀತಿಯ ಅರ್ಜಿಗಳು ಬಂದಿವೆ. ಒಂದು ಗ್ರಾಮದಲ್ಲಿ 9 ಲಕ್ಷ ರೂ. ನೀಡಿದ್ದರೆ, ಮತ್ತೊಂದು ಊರಿನ ಮಾಲೀಕರಿಗೆ 25 ಲಕ್ಷ ರೂ. ನೀಡಲಾಗಿದೆ. ಇದರಿಂದ ವ್ಯತ್ಯಾಸವಾಗಿದೆ. ಹೀಗಾಗಿ, ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳ ಮಾಲೀಕರಿಗೆ ಯಾವ ತಾರತಮ್ಯ ಇಲ್ಲದಂತೆ ಎಕರೆಗೆ 18 ಲಕ್ಷ ರೂ.ನಿಗದಿಪಡಿಸಿದರೆ ಅನುಕೂಲವಾಗಲಿದೆ ಎಂದರು.
ಪ್ರಕರಣಗಳನ್ನು ಇತ್ಯರ್ಥಪಡಿಸಲು ಎನ್‌ಎಚ್ ವಕೀಲರು ಮಾಹಿತಿ ಸಮೇತ ಬರಬೇಕು. ದಡದಹಳ್ಳಿ, ದಡದಕಲ್ಲಹಳ್ಳಿ, ಯಲಚಹಳ್ಳಿ, ಪಾಲಹಳ್ಳಿ ಕಡೆಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಸಮಸ್ಯೆ ಇತ್ಯರ್ಥಪಡಿಸಿಕೊಡುವಂತೆ ಪ್ರತಾಪ್ ಸಿಂಹ ಸೂಚಿಸಿದರು. ಸಭೆಯಲ್ಲಿ ಭೂ ಸ್ವಾಧೀನಾಧಿಕಾರಿ ಶಿವೇಗೌಡ ಸೇರಿದಂತೆ ಮತ್ತಿತರರು ಇದ್ದರು.