ಜಮೀನು ಸ್ವಾಧೀನಕ್ಕೆ ಬಲವಂತವಿಲ್ಲ, ವಸತಿ ಸಚಿವ ವಿ. ಸೋಮಣ್ಣ ಅನಿಸಿಕೆ, ಕಾಡುಜಕ್ಕನಹಳ್ಳಿಯಲ್ಲಿ ರೈತರೊಂದಿಗೆ ಚರ್ಚೆ

27slb1
Published on

ಆನೇಕಲ್: ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಪಡೆದುಕೊಳ್ಳುವುದಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ತಾಲೂಕಿನ ಇಂಡ್ಲವಾಡಿ ಗ್ರಾಪಂನ ಕಾಡುಜಕ್ಕನಹಳ್ಳಿಯಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯಲ್ಲಿ ಬಡಾವಣೆ ನಿರ್ಮಿಸಲು ಭೂಮಿ ವೀಕ್ಷಣೆಗೆ ಶನಿವಾರ ಆಗಮಿಸಿದ್ದ ಅವರು ರೈತರೊಂದಿಗೆ ಚರ್ಚೆ ನಡೆಸಿದರು.

ಸರ್ಕಾರ ರೈತರ ಹಿತ ಕಾಪಾಡಲು ಸದಾ ಸಿದ್ಧ. ಸೂರ್ಯನಗರ 4ನೇ ಹಂತದ ಜಮೀನು ವಶಪಡಿಸಿಕೊಳ್ಳುವುದರಿಂದ ಯಾವುದೇ ಲಾಭ ಇಲ್ಲ. ರೈತರು ಭೂಮಿ ನೀಡಿದರೆ ಮಾತ್ರ ಬಡಾವಣೆ ನಿರ್ಮಾಣ ಮಾಡುತ್ತೇವೆ. ಇಲ್ಲವಾದರೆ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು.

ರೈತರ ಭೂಮಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಡಿಪಿಆರ್ ಇಲಾಖೆ ಸರ್ಕಾರಕ್ಕೆ ನೀಲಿನಕ್ಷೆ ಸಲ್ಲಿಸುತ್ತದೆ. ನಂತರ ಭೂ ಮಾಲೀಕರ ಖಾತೆಗೆ ನೇರವಾಗಿ ಹಣ ಮಾಡಲಾಗುವುದು ಎಂದರು.

ರೈತರು ಒಪ್ಪಿದರೆ ಆನೇಕಲ್ ಭಾಗದಲ್ಲಿ 1,900 ಎಕರೆ ಜಮೀನು ಪಡೆಯಲಿದ್ದು, ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಲಾಗುವುದು. ಬಡಾವಣೆ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿ ನಮ್ಮ ಜವಾಬ್ದಾರಿ ಎಂದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ವಸತಿ ಸಚಿವರು ಇಲಾಖೆಗೆ ಜೀವಕಳೆ ನೀಡಲು ಮುಂದಾಗಿದ್ದಾರೆ, ಬಿಡದಿಯಲ್ಲೂ ಕೂಡ ಇದೇ ರೀತಿ ಬಡಾವಣೆ ನಿರ್ಮಾಣ ಮಾಡಿ ಬಡವರಿಗೆ ನೀಡಬೇಕಿದೆ ಎಂದರು.

ಅಧಿಕಾರಿಗಳು ಸಚಿವರು ಇದ್ದ ಸಮಯದಲ್ಲಿ ಒಂದು ರೀತಿ ವರ್ತಿಸಿದರೆ ಅವರು ಇಲ್ಲದಾಗ ಕೆಟ್ಟದಾಗಿ ವರ್ತಿಸುತ್ತಾರೆ. ರೈತರು ಜಮೀನು ನೀಡಿ ನಂತರ ಕಚೇರಿಗೆ ಹೋದರೆ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದರು.

ಭೂಮಿ ಸರ್ವೇ ಸಂದರ್ಭದಲ್ಲಿ ಾರಂ-53,57, ಸಾಗುವಳಿ ಚೀಟಿ ಹಾಗೂ ಆರ್‌ಟಿಸಿ ಗುರುತಿಸಿ ಭೂಮಿ ವಶಕ್ಕೆ ಪಡೆಯಬೇಕು ಎಂದರು.

ರೈತರ ಸಮಸ್ಯೆ ಬಗೆಹರಿಸಿ ಬಡಾವಣೆ ನಿರ್ಮಾಣ ಮಾಡುವುದಕ್ಕೆ ನಮ್ಮ ಸಹಕಾರವಿದೆ. ರೈತರ ಸಲಹೆ ಹಾಗೂ ಅವರ ಬೇಡಿಕೆ ಏನಾದರೂ ಇದ್ದರೆ ತಿಳಿಸಿ ಬಗೆಹರಿಸಿಕೊಳ್ಳಬೇಕು ಎಂದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಎಲ್ಲ್ಲ ಸೌಕರ್ಯ ಸಿಗುತ್ತದೆ ಎಂದು ಬಡಾವಣೆಯಲ್ಲಿ ಸೈಟು ಖರೀದಿ ಮಾಡುತ್ತಾರೆ. ಆದರೆ ಸರಿಯಾದ ಸೌಕರ್ಯ ಸಿಗದೆ ಜನ ತೊಂದರೆಗೆ ಸಿಲುಕಬಾರದು. ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಗ್ರಾವ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ವೆಂಕಟಮಾರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಕುಣಿಗಲ್ ಶಾಸಕ ರಂಗನಾಥ್, ತಾಪಂ ಸದಸ್ಯ ಮಹದೇವ, ಪುರಸಭಾ ಸದಸ್ಯರಾದ ಪದ್ಮನಾಭ್, ಕೃಷ್ಣರಾಜು, ಹಿಂದುಳಿದ ವರ್ಗಗಳ ಅಧ್ಯಕ್ಷ ಅಚ್ಯುತ್ ರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net