

ಸಂತೋಷ ವೈದ್ಯ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ (ಮೇಲ್ಸೇತುವೆ)ಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರನ್ವಯ 12.26 ಹೆಕ್ಟೇರ್ (1,22,657 ಚದರ ಮೀಟರ್) ವಿಸ್ತೀರ್ಣದ ಪ್ರದೇಶವನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ 966 ಆಸ್ತಿಗಳ ಮಾಲೀಕರಿಗೆ ನೋಟಿಸ್ ಜಾರಿಯಾಗಲಿದೆ.
ಹುಬ್ಬಳ್ಳಿಯ ಹೃದಯಭಾಗ ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು 294 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯು 3 ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿಕೊಂಡಿದೆ. ರಾಣಿ ಚನ್ನಮ್ಮ ವೃತ್ತದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-63ರ ಕಿ.ಮೀ. 135.65ರಿಂದ 136.45ರವರೆಗೆ (ಹುಬ್ಬಳ್ಳಿ-ಗದಗ ರಸ್ತೆ), ರಾಷ್ಟ್ರೀಯ ಹೆದ್ದಾರಿ-4ರ ಕಿ.ಮೀ. 249ರಿಂದ 250ರವರೆಗೆ (ಹುಬ್ಬಳ್ಳಿ-ಧಾರವಾಡ ರಸ್ತೆ) ಹಾಗೂ ರಾಷ್ಟ್ರೀಯ ಹೆದ್ದಾರಿ-218ರ ಕಿ.ಮೀ. 193.8 ರಿಂದ 193.35ರವರೆಗೆ (ಹುಬ್ಬಳ್ಳಿ-ವಿಜಯಪುರ) ಭೂಸ್ವಾಧೀನ ಪ್ರಕ್ರಿಯೆಗೆ ಅವಶ್ಯವಾಗಿರುವ ಕಟ್ಟಡ ಸಹಿತ ಹಾಗೂ ಕಟ್ಟಡ ರಹಿತವಾಗಿರುವ ಜಮೀನುಗಳನ್ನು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಕಾಯ್ದೆ-1956ರ 3 (ಎ) ಸೆಕ್ಷನ್ ಪ್ರಕಾರ ಈಗ ಗುರುತಿಸಿರುವ ಎಲ್ಲ 966 ಆಸ್ತಿಗಳು ಭೂ ಸ್ವಾಧೀನಕ್ಕೆ ಒಳಪಡುವ ಸಾಧ್ಯತೆಗಳಿಲ್ಲ. ಆದರೆ, ಎಲ್ಲ 966 ಆಸ್ತಿಗಳ ಮಾಲೀಕರಿಗೆ ಅಥವಾ ಹಿತಾಸಕ್ತಿವುಳ್ಳವರಿಗೆ ನೋಟಿಸ್ ಜಾರಿಯಾಗಲಿದೆ. ಬಳಿಕ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಅಂತಿಮ ಹಂತದ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. ಅಂತಿಮವಾಗಿ ಅವಶ್ಯವಾಗಿರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪರಿಹಾರ ನಿಗದಿಯಾಗಲಿದೆ. ಸಮೀಕ್ಷೆ ಕಾರ್ಯ ಎಷ್ಟು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂಬುದು ಇಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರತಿ ಆಸ್ತಿಯ ಮಾಲೀಕರಿಗೆ ಮನವರಿಕೆ ಮಾಡಬೇಕಾಗಿರುತ್ತದೆ.
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಜೂ. 1ರಂದು ಅಧಿಸೂಚನೆ ಹೊರಡಿಸಿದೆ. ಭೂಮಾಲೀಕರು ಅಥವಾ ಯಾವುದೇ ರೀತಿಯ ಹಿತಾಸಕ್ತಿ ಉಳ್ಳವರು ಅಧಿಸೂಚನೆ ಹೊರಡಿಸಿರುವ 21 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಅಂತಹ ಆಕ್ಷೇಪಣೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿಗಳು, ಮಿನಿ ವಿಧಾನಸೌಧ ಧಾರವಾಡ ಇಲ್ಲಿಗೆ ಸಲ್ಲಿಸಬೇಕು.
ಹುಬ್ಬಳ್ಳಿಯಲ್ಲಿ ಪ್ರಗತಿಯಲ್ಲಿರುವ ಫ್ಲೈಓವರ್ನ ಫಿಲ್ಲರ್ಗಳ ಎತ್ತರ ಹಾಗೂ ಆಮ್ರ್ ಅಗಲವು ರಸ್ತೆ ಮಾರ್ಗಕ್ಕೆ ಅನುಗುಣವಾಗಿ ವ್ಯತ್ಯಾಸವಿದೆ. 7.5 ಮೀಟರ್ ಹಾಗೂ 5.5 ಮೀಟರ್ ಎತ್ತರದ ಫಿಲ್ಲರ್ಗಳಿವೆ. ಆಮ್ರ್ ಅಗಲ 5.5 ಮೀಟರ್, 14 ಮೀಟರ್ ಹಾಗೂ 16.5 ಮೀಟರ್ಗಳಿವೆ. ಈ ವ್ಯತ್ಯಾಸಕ್ಕೆ ಅನುಗುಣವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಎಷ್ಟು ಪ್ರದೇಶಗಳು ಬರಲಿವೆ ಎಂಬುದು ಅಂತಿಮವಾಗಿ ನಿರ್ಧಾರವಾಗಲಿವೆ.
ಹುಬ್ಬಳ್ಳಿ ಪ್ಲೈಓವರ್ ನಿರ್ವಣಕ್ಕೆ 2021ರ ಜನವರಿ 15ರಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ ಗಡ್ಕರಿ ಚಾಲನೆ ನೀಡಿದ್ದಾರೆ. ಕಾಮಗಾರಿ 2021ರ ಜೂನ್ನಲ್ಲಿ ಆರಂಭಗೊಂಡಿದ್ದು, 2024ರ ಜೂನ್ನಲ್ಲಿ ಪೂರ್ಣಗೊಳ್ಳಬೇಕಿದೆ. ಸದ್ಯ ಕಾಮಗಾರಿಯು ನಿಧಾನಗತಿಯಲ್ಲಿ ಸಾಗಿದ್ದು, ಇನ್ನೊಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ.
ಹುಬ್ಬಳ್ಳಿ ಫ್ಲೈಓವರ್ ನಿರ್ವಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, 966 ಆಸ್ತಿಗಳನ್ನು ಗುರುತಿಸಲಾಗಿದೆ. ನಾವು ಮತ್ತು ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರತಿ ಆಸ್ತಿಯ ಸಮೀಕ್ಷೆ ನಡೆಸಲಿದ್ದೇವೆ. ಬಳಿಕ ಅಂತಿಮವಾಗಿ ಅವಶ್ಯಕವಾಗುವ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ಜರುಗಲಿದೆ. * ರಾಜೇಂದ್ರ ಹುರಕಡ್ಲಿ, ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ