

ದೊಡ್ಡಬಳ್ಳಾಪುರ : ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಬಲವಂತದ ಭೂ ಸ್ವಾಧಿನ ವಿರೋಧಿಸಿ ನಗರದ ತಾಲೂಕು ಕಚೇರಿ ಮುಂಭಾಗ ಕಸಾಘಟ್ಟ, ಐನಹಳ್ಳಿ, ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ ಗ್ರಾಮಗಳ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ರೈತರು ಭೂಮಿ ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದಾರೆ. ದೊಡ್ಡಬೆಳವಂಗಲ ಭಾಗದ ರೈತರು ಭೂಸ್ವಾಧಿನದ ನೋಟಿಸ್ ಬರುವ ಮುನ್ನ ಎಚ್ಚೆತ್ತು ಪ್ರತಿಭಟಿಸುತ್ತಿರುವುದು ಸಮರ್ಪಕ ವಾಗಿದೆ. ಭೂಸ್ವಾಧಿನ ಮಾಡದಂತೆ ಈಗಾಗಲೇ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ, ಅವರು ಸಹ ಈ ಭೂಮಿ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಆದರೂ ಆರಂಭವಾಗಿರುವ ಹೋರಾಟ ನಿಲ್ಲಬಾರದು ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸರ್ಕಾರ ವಿವಿಧ ಕಾರಣಗಳಿಂದ ಭೂಸ್ವಾಧಿನ ಮಾಡಿಕೊಳ್ಳುತ್ತಿದೆ. ಚನ್ನರಾಯಪಟ್ಟಣ ಹೋರಾಟದಂತೆ ತಾಲೂಕಿನಲ್ಲೂ ಅದೇ ರೀತಿ ಹೋರಾಟ ಮಾಡಬೇಕು. ಬೆಂಗಳೂರು ಸಮೀಪ ಭೂಮಿ ಫಲವತ್ತಾಗಿದ್ದು, ನಗರಕ್ಕೆ ಆಹಾರ ಪೂರೈಕೆ ಮಾಡುತ್ತಿದೆ. ಇಂತಹ ಭೂಮಿಯನ್ನು ವಶಪಡಿಸಿಕೊಳ್ಳಬೇಡಿ ಎಂದು ವಿಧಾನಸಭೆಯಲ್ಲೂ ಈ ಹಿಂದೆ ಮನವಿ ಮಾಡಲಾಗಿತ್ತು ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ರೈತ ವಿರೋಧಿ ಧೋರಣೆಗಳಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಫಲವತ್ತಾದ ಭೂಮಿ ಬಂಡಾವಾಳ ಶಾಹಿಗಳ ಕೈಸೇರುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನಗರದ ವಾಸಿಗಳಿಗೆ ಹಣ್ಣು, ಮಾಂಸ, ಹಾಲು ನೀಡುವ ರೈತರ ಭೂಮಿಗೆ ಕನ್ನಹಾಕಲು ಬಂದಿದ್ದಾರೆ. ಟೌನ್ಶಿಪ್ ನೆಪದಲ್ಲಿ ಭೂಸ್ವಾಧಿನ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಟ್ರ್ಯಾಕ್ಟರ್ ರ್ಯಾಲಿ : ಪ್ರತಿಭಟನೆಯ ಭಾಗವಾಗಿ ತಾಲೂಕಿನ ರೈತರು ದೊಡ್ಡಬೆಳವಂಗಲದಿಂದ ದೊಡ್ಡಬಳ್ಳಾಪುರ ನಗರಕ್ಕೆ ಟ್ರಾ$್ಯಕ್ಟರ್ ರ್ಯಾಲಿ ನಡೆಸಿದರು. ನಂತರ ರಾಗಿ, ಜೋಳದ ತೆನೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಪ್ರತಿಭಟನೆಗೆ ಸಿಐಟಿಯು, ರೈತ ಸಂಘ, ಸಿಪಿಐಎಂ, ಕನ್ನಡ ಪಕ್ಷ, ಕಾರ್ಮಿಕ ಮುಖಂಡರು ಸೇರಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಸಾಥ್ ನೀಡಿದರು.
ಭೂಸ್ವಾಧಿನದ ಮೂಲಕ ರೈತರ ಜಮೀನು ಕಿತ್ತುಕೊಳ್ಳುವ ಕೆಲಸವಾಗುತ್ತಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ ಅನೇಕ ಜಮೀನು ವಶಪಡಿಸಿ ಕೊಳ್ಳಲಾಗಿದೆ. ವಂಶಪಾರಂಪರ್ಯವಾಗಿ ಬಂದ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ.
> ಸಂಜೀವ್ ನಾಯಕ್ ರಾಜ್ಯ ಉಪಾಧ್ಯಕ್ಷ, ಕನ್ನಡ ಪಕ್ಷ