ಭೂಮಿ ಖಾತೆ ದಂಧೆ ತನಿಖೆ ಶುರು: ಮೂಲ ದಾಖಲೆ ಸಂಗ್ರಹಿಸಿದ ತಂಡ

Land account scam Investigation started mandya
Published on

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆನ್ನುವ ಪ್ರಕರಣದ ತನಿಖೆ ಪ್ರಾರಂಭವಾಗಿದೆ. ರಾಜ್ಯಸರ್ಕಾರದ ಸೂಚನೆಯಂತೆ ರಚನೆಯಾಗಿರುವ ಅಧಿಕಾರಿಗಳ ತಂಡ ಸೋಮವಾರ ಮಳವಳ್ಳಿ ತಾಲೂಕು ಕಚೇರಿಯಲ್ಲಿ ಪರಿಶೀಲನೆ ನಡೆಸಿತು.

ಭೂಮಿ ಶಾಖೆ, ತಹಸೀಲ್ದಾರ್ ಹಾಗೂ ಸಬ್‌ರಿಜಿಸ್ಟರ್ ಕಚೇರಿ ಅಧಿಕಾರಿಗಳೇ ದಾಖಲೆಯನ್ನೇ ತಿದ್ದಿ ಸರ್ಕಾರ ಜಮೀನಿನನ್ನು ಕೋಟ್ಯಂತರ ರೂ.ಗೆ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆನ್ನುವ ಹಗರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕೂಡ ತನಿಖೆಗೆ ಅಸ್ತು ಎಂದಿದೆ. ಅದರಂತೆ ಕಂದಾಯ ಆಯುಕ್ತಾಲಯದ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷರಾಗಿ, ಮೈಸೂರು ವಿಭಾಗದ ಹೆಚ್ಚುವರಿ ಆಯುಕ್ತೆ ಕವಿತಾ ರಾಜರಾಂ, ಕಂದಾಯ ಆಯುಕ್ತಾಲಯದ ಫ್ಲೈಯಿಂಗ್ ಸ್ಕ್ವಾಡ್‌ನ ಸಹಾಯಕ ಆಯುಕ್ತಯ ಎಚ್.ಡಿ.ರಾಜೇಶ್, ಪ್ರಾದೇಶಿಕ ಆಯುಕ್ತರ ಕಚೇರಿ ತಹಸೀಲ್ದಾರ್‌ಗಳಾದ ಎಸ್.ಎಲ್.ನಯನಾ, ಎಂ.ಆರ್.ಶಕುಂತಲಾ, ವೈ.ಎಸ್.ಸುಬ್ರಮಣ್ಯ, ಕಂದಾಯ ಆಯುಕ್ತಾಲಯದ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಭೂಮಿ ತಂತ್ರಾಂಶ ಕೋಶದ ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ ಸದಸ್ಯರಾಗಿ ಹಾಗೂ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ರಾಜ್ಯಸರ್ಕಾರದ ಸೂಚನೆಯಂತೆ ಸೋಮವಾರ ಭೇಟಿ ನೀಡಿದ ತನಿಖಾ ತಂಡ ಭೂಮಿ ಶಾಖೆ, ಆರ್‌ಆರ್‌ಟಿ ಸೆಕ್ಷನ್ ಹಾಗೂ ಸರ್ವೇ ವಿಭಾಗಕ್ಕೆ ಭೇಟಿ ನೀಡಿ ಜಮೀನಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳಿರುವ ತಂತ್ರಾಂಶವನ್ನು ಪಡೆದುಕೊಂಡಿದೆ. ಈ ತಂಡಕ್ಕೆ ಮಂಡ್ಯ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಹಾಗೂ ಮಳವಳ್ಳಿ ತಹಸೀಲ್ದಾರ್ ಕೆ.ಎನ್.ಲೋಕೇಶ್ ಮಾಹಿತಿ ನೀಡಿದರು. ಈಗಾಗಲೇ ಮೇಲ್ನೋಟಕ್ಕೆ ಹಗರಣ ನಡೆದಿರುವುದು ಕಂಡುಬಂದಿದೆ. ಆದ್ದರಿಂದ ತನಿಖಾ ತಂಡ ಕೆಲಸ ಪ್ರಾರಂಭಿಸುತ್ತಿದ್ದಂತೆ ತಪ್ಪಿತಸ್ಥರಿಗೆ ನಡುಕ ಶುರುವಾಗಿದ್ದರೆ, ಜಮೀನು ಖರೀದಿ ಮಾಡಿರುವವರಿಗೆ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net