ಮಾಜಿ ಸೈನಿಕರಿಗಿಲ್ಲ ಭೂ ಮಂಜೂರಾತಿ

LAND
Published on

ಮಡಿಕೇರಿ:

ದೇಶಸೇವೆಗೆ ಜೀವನ ಮುಡಿಪಾಗಿಟ್ಟ ಮಾಜಿ ಸೈನಿಕರಿಗೆ ಸರ್ಕಾರದಿಂದ ಭೂ ಮಂಜೂರಾತಿ ಸಮರ್ಪಕವಾಗಿ ಆಗುತ್ತಿಲ್ಲ. ಭೂಮಿಗಾಗಿ ಸಲ್ಲಿಸಿರುವ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ರಾಜ್ಯದಲ್ಲಿ ಸರ್ಕಾರಿ ಭೂಮಿಯ ತೀವ್ರ ಕೊರತೆ ಇರುವುದರಿಂದ ಭೂ ಮಂಜೂರಾತಿ ಸಾಧ್ಯವಾಗುತ್ತಿಲ್ಲ ಎನ್ನುವ ಉತ್ತರ ಕೊಟ್ಟಿದೆ ಸರ್ಕಾರ. ಕೊಡಗಿನಲ್ಲಿ 2,009 ಮಾಜಿ ಸೈನಿಕರು ಸರ್ಕಾರದ ಭೂ ಮಂಜೂರಾತಿಗಾಗಿ ಕಾಯುತ್ತಿದ್ದಾರೆ.

ಐದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರು ಮತ್ತು ಮಾಜಿ ಸೈನಿಕರು ತಮ್ಮ ಸ್ವಂತ ತಾಲೂಕುಗಳಲ್ಲಿ ರಾಜ್ಯ ಸರ್ಕಾರದಿಂದ ಭೂಮಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹಾಗಾಗಿ ಸೈನಿಕ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲಿ ಭೂ ಮಂಜೂರಾತಿಗಾಗಿ ಕೋರಿ ಅರ್ಜಿ ಸಲ್ಲಿಸುವ ಸೈನಿಕರ ಸಂಖ್ಯೆ ವರ್ಷದಿAದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ ಸರ್ಕಾರ ಮಾತ್ರ ಹೀಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡದೇ ವಿಳಂಬ ಮಾಡುತ್ತಿದೆ. ನಿಗದಿತ ಪ್ರಮಾಣದಲ್ಲಿ ಸರ್ಕಾರಿ ಭೂಮಿ ಲಭ್ಯ ಇಲ್ಲದಿರುವುದರಿಂದ ಹೀಗೆ ಮಾಡಲಾಗುತ್ತಿದೆ ಎನ್ನುವ ಕಾರಣವನ್ನು ಸರ್ಕಾರ ಕೊಡುತ್ತಿದೆ.

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರು ನಿವೃತ್ತರಾದ ನಂತರ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಉಚಿತವಾಗಿ ಸರ್ಕಾರದ ವತಿಯಿಂದ ಜಮೀನು ನೀಡಲಾಗುತ್ತದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ಪ್ರಕಾರ 10 ಎಕರೆವರೆಗೆ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಅರ್ಜಿ ಸಲ್ಲಿಸಿ 15 ವರ್ಷಗಳಿಗೂ ಅಧಿಕ ಕಾಲ ಕಾದರೂ ಜಮೀನು ಲಭ್ಯವಾಗದಿರುವ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟಿಸಿದೆ. ಸರ್ಕಾರಿ ಭೂಮಿ ಕೊರತೆಯಿಂದ ಈ ಸಮಸ್ಯೆ ಸೃಷ್ಟಿಯಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯಾವುದೇ ಫಲ ಸಿಗುತ್ತಿಲ್ಲ ಎನ್ನುವ ಆರೋಪಗಳಿವೆ.

ಈ ಮಧ್ಯೆ ಸೈನಿಕರು, ಮಾಜಿ ಸೈನಿಕರಿಗೆ ಜಮೀನು ಅಥವಾ ನಿವೇಶನ ಮಂಜೂರಾತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸರ್ಕಾರ 2024ರ ಸೆ.20ರಂದು ಜಿಲ್ಲಾಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಸೈನಿಕರು, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಅಥವಾ ಸಂಬAಧಪಟ್ಟ ಜಿಲ್ಲೆಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ (3)ರಡಿ ಪ್ರಕಟಿಸಿರುವ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ನಿಯಮಗಳನ್ವಯ ಉಚಿತವಾಗಿ ಭೂಮಿ ಮಂಜೂರು ಮಾಡಲು ಕ್ರಮವಹಿಸಬೇಕು.

ಸೈನಿಕರು, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅರ್ಜಿಯನ್ನು ಅದೇ ಜಿಲ್ಲೆಯ ಯಾವುದಾದರೂ ತಾಲೂಕಿಗೆ ಮಾತ್ರÀ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಂಬAಧಿಸಿದ ಜಿಲ್ಲಾಧಿಕಾರಿ ಸಂಬAಧಪಟ್ಟ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ತಾಲೂಕಿನಲ್ಲಿ ಮಂಜೂರಾತಿಗಾಗಿ ಜಮೀನು ಲಭ್ಯವಿದ್ದಲ್ಲಿ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಬೇಕು.

ಒಂದು ವೇಳೆ ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ನಗರ ಪ್ರದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣದ ನಿವೇಶನ ಅಥವಾ ಗ್ರಾಮೀಣ ಪ್ರದೇಶದಲ್ಲಿ 2,400 ಚದರ ಅಡಿ ನಿವೇಶನವನ್ನು ಜಾರಿಯಲ್ಲಿರುವ ಸರ್ಕಾರದ ಯಾವುದೇ ವಸತಿ ಯೋಜನೆಯಡಿಯಲ್ಲಿ ಅಥವಾ ಸರ್ಕಾರ ರೂಪಿಸಬಹುದಾದ ಯಾವುದೇ ಯೋಜನೆಯಡಿಯಲ್ಲಿ ಮಂಜೂರು ಮಾಡಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು.

ಬೆಂಗಳೂರು ನಗರ ಜಿಲ್ಲೆಗೆ ಸಂಬAಧಪಟ್ಟ ಅರ್ಜಿಗಳನ್ನು ಮಾತ್ರ ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶವಿದೆ. ಉಳಿದ ಇತರ ಜಿಲ್ಲೆಯ ಅರ್ಜಿಗಳನ್ನು ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶ ಇಲ್ಲ ಎನ್ನುವ ಸೂಚನೆಗಳನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ನೀಡಿದೆ.

ಸರ್ಕಾರದ ಮಾಹಿತಿ ಪ್ರಕಾರ ಕೊಡಗಿನಲ್ಲಿ 4,566 ಮಾಜಿ ಸೈನಿಕರು ಇದ್ದಾರೆ. ಇವರ ಪೈಕಿ 2,024 ಮಾಜಿ ಸೈನಿಕರು ಜಮೀನು ಮಂಜೂರಾತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೇವಲ 15 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. 2,009 ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿದೆ. ಕೆಲವರಿಗೆ ಜಮೀನು ಲಭ್ಯವಿಲ್ಲದ ಕಾರಣ ನೀಡಿ ಹಿಂಬರಹ ಕೊಟ್ಟು ಅರ್ಜಿ ವಿಲೇ ಮಾಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಪ್ರಚುರಪಡಿಸಿ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇರುವುದರಿಂದಲೂ ಕೆಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇದಲ್ಲದೆ ಕೆಲ ಅರ್ಜಿಗಳನ್ನು ಕೆಲವೊಂದು ಕಾರಣಗಳಿಂದ ತಿರಸ್ಕರಿಸಲಾಗಿದೆ. ಸರ್ಕಾರಿ ಜಮೀನು ಮಂಜೂರು ಮಾಡಲು ಸೈನಿಕರು ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬAಧಪಟ್ಟ ತಾಲೂಕಿನಲ್ಲಿ ಅರ್ಜಿ ಸಲ್ಲಿಸದ ಕಾರಣ ನೀಡಿಯೂ ತಿರಸ್ಕರಿಸಿದ ಪ್ರಕರಣಗಳು ವರದಿಯಾಗಿದೆ. ಅರ್ಜಿದಾರರು ಆದಾಯದ ಬಗ್ಗೆ ದೃಢೀಕೃತ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದಲೂ ಆರ್ಜಿಗಳನ್ನು ತಿರಸ್ಕರಿಸಲಾಗಿದೆ.

ಈ ಮಧ್ಯೆ ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರ್ಕಾರಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ಅವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಈಚೆಗೆ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿರುವುದು ಮಾಜಿ ಸೈನಿಕರಲ್ಲಿ ಒಂದಿಷ್ಟು ನಿರೀಕ್ಷೆ ಮೂಡಿಸಿದೆ. ಆದರೆ ಕೃಷಿ ಮಾಡಲು ಜಮೀನು ನಿರೀಕ್ಷೆಯಲ್ಲಿರುವವರಿಗೆ ಈ ಭರವಸೆ ನಿರಾಸೆ ಉಂಟು ಮಾಡಿದೆ.

ಜಮೀನು, ನಿವೇಶನ ಮಂಜೂರಾತಿಗಾಗಿ ಸೈನಿಕರು, ಮಾಜಿ ಸೈನಿಕರು ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ವಯ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬAಧ 2024ರ ಸೆ.20ರಂದು ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ನಿವೇಶನ ಮಂಜೂರು ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ಕೃಷ್ಣ ಬೈರೇಗೌಡ, ಕಂದಾಯ ಸಚಿವ

ನಾನು ಸೈನ್ಯದಿಂದ ನಿವೃತ್ತನಾಗಿ ಬಂದು 10 ವರ್ಷ ಕಳೆಯಿತು. ನನ್ನ ಊರಿನಲ್ಲಿ ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರದಿಂದ ಈ ತನಕ ಯಾವುದೇ ಉತ್ತರ ಬಂದಿಲ್ಲ. ಇದೀಗ ಸರ್ಕಾರ ನಿವೇಶನ ಕೊಡುವುದಾಗಿ ಹೇಳುತ್ತಿರುವುದು ಸರಿಯಲ್ಲ. ಕೊಡಗಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ಜಾಗ ಇದೆ. ಮಾಜಿ ಸೈನಿಕರಿಗೆ ಈ ಭೂಮಿ ಮಂಜೂರು ಮಾಡಲಿ. ದೇಶ ಸೇವೆ ಮಾಡಿದವರಿಗೆ ಸರ್ಕಾರ ಈ ರೀತಿಯಲ್ಲಾದರೂ ಗೌರವ ಕೊಡಲಿ.

ಹೆಸರು ಹೇಳಲು ಇಚ್ಛಿಸದ ಮಾಜಿ ಸೈನಿಕ, ಭಾಗಮಂಡಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net