

ವಿಜಯಪುರ : ಆಧುನಿಕ ಭರಾಟೆಯಲ್ಲಿ ತನ್ನ ಸಂತತಿಯ ಮೂಲ ಅರಿಯಬೇಕು. ಭಾಷೆ ಅಳಿವು ಉಳಿವಿಗಾಗಿ ಹೋರಾಟದ ಮೂಲಕ ಪಕ್ಷಾತೀತವಾಗಿ ಪ್ರತಿಯೊಬ್ಬ ರಾಜಕಾರಣಿಗಳು ಶ್ರಮಿಸಬೇಕಾಗಿದೆ. ಸಮಾಜ ಜಾಗೃತಿಗೊಳಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದು ವೈದ್ಯ ಡಾ.ಬಾಬು ರಾಜೇಂದ್ರನಾಯಕ ಹೇಳಿದರು.
ನಗರದ ಮಧುವನ ಹೊಟೇಲ್‌ನಲ್ಲಿ ಭಾನುವಾರ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸ್ಥಾಪನೆ ಆದ ಮೇಲೆ ಮೊಟ್ಟ ಮೊದಲಿಗೆ ವಿಚಾರ ಸಂಕಿರಣ ಸಮಾರಂಭ ಆಯೋಜಿಸಿದ್ದು ಸಂತಸದ ಸಂಗತಿ ಎಂದರು.
ಅಕಾಡೆಮಿ ಸದಸ್ಯೆ ಇಂದುಮತಿ ಲಮಾಣಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಇರುವ ಸಂಖ್ಯೆಯಷ್ಟು ಬಂಜಾರ ಸಮುದಾಯದ ಜನ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಹಾಗಾಗಿ ಜಿಲ್ಲೆಯಲ್ಲಿ ಒಂದು ಕಲಾಗ್ರಾಮ (ಲಂಬಾಣಿ ಲೋಕ) ಸ್ಥಾಪನೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಹರಿಲಾಲ್ ಪವಾರ ಮಾತನಾಡಿ, ಸುಂದರ ಸುಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆಯ ಸೊಬಗು ಲಂಬಾಣಿ ಜನಾಂಗ ಕಾಪಾಡಿಕೊಂಡು ಬಂದಿದೆ ಮತ್ತು ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಬತ್ತಲಾರದ ಸಾಹಿತ್ಯದ ಚಿಲುಮೆ ಬಂಜಾರ ಸಾಹಿತ್ಯದಲ್ಲಿ ತುಂಬಿಕೊಂಡಿದೆ. ಅಕಾಡೆಮಿ ಸ್ಥಾಪಿಸಿದ್ದರಿಂದ ನಮ್ಮ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲಕರವಾಗಿದೆ. ಸಮಾಜದಲ್ಲಿ ತಮ್ಮದೆ ಆದ ಬಹುಸಂಸ್ಕೃತಿಯ ಕುರುಹು ತನ್ನೊಳಗೆ ಹುದುಗಿಸಿಕೊಂಡು ಅದ್ಭುತ ಸುಂದರ ಸಮಾಜ ಲಂಬಾಣಿ ಸಮುದಾಯ ಎಂದರು.
ಕಳೆದ 20ರಿಂದ 30 ವರ್ಷಗಳ ಸತತ ಪ್ರಯತ್ನದಿಂದ ಇಂದು ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ. ಮಾತೃಭಾಷೆ ಮಾತನಾಡಿ ಪ್ರೀತಿಸಿ, ಗೌರವಿಸಿ, ಆಧರಿಸಿ ಇದು ನಮ್ಮ ಹೆಮ್ಮೆಯ ತಾಂಡಗಳ ಹಲವಾರು ಹಬ್ಬಹರಿದಿನಗಳ ವೈಶಿಷ್ಟ್ಯ ಮತ್ತೊಂದು ಭಾಷೆಯಲ್ಲಿ ಕಾಣಲು ಅಸಾಧ್ಯ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು ಭಾಷೆ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕೆಂದರು.
ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ಅಕಾಡೆಮಿಯು ಮುಂಬರುವ ದಿನಗಳಲ್ಲಿ ಸಂಸ್ಕೃತಿ ಮತ್ತು ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಸಿದ್ಧಲಿಂಗ ಸ್ವಾಮೀಜಿ, ಬಾಲಶಿವಯೋಗಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಡಾ.ನಾರಾಯಣ ಪವಾರ, ರಾಜಪಾಲ ಚವ್ಹಾಣ, ಪಿ.ಅನುಪಮಾ, ಡಾ.ಸವಿತಾ ಲಮಾಣಿ, ಡಾ.ಬಸವರಾಜ ಚವ್ಹಾಣ, ಅನಿಲ ಹೊಸಮನಿ, ನಾರಾಯಣ ಬಾಬಾನಗರ, ಸುರೇಶ ಬಿಜಾಪುರ, ಡಾ.ಸುರೆಖಾ ರಾಠೋಡ, ಜಯಶ್ರೀ ನಾಯಿಕ ಮತ್ತಿತರರಿದ್ದರು.