ಕೊಡಗು : ಭರತನಾಟ್ಯ ಕಲಾವಿದೆ ಬಿ.ಆರ್.ಸುನೀತಾ ಶೆಟ್ಟಿ ಅವರ ಲಲಿತಾ ನಾಟ್ಯಾಲಯ ನೃತ್ಯ ಶಾಲೆಯ ವಾರ್ಷಿಕೋತ್ಸವ -ನೂಪುರಾರ್ಚನೆ ದಿನದ ಅಂಗವಾಗಿ ಗುರುವಾರ ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿಗಳಿಂದ ಗೆಜ್ಜೆಪೂಜೆ, ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶನಿವಾರಸಂತೆ ಗೆಜ್ಜೆಪೂಜೆ ಭರತನಾಟ್ಯ ಕಾರ್ಯಕ್ರಮವನ್ನು ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾ.ಸೆಬಾಸ್ಟೆನ್ ಮೈಕಲ್, ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ ಕೆ.ಪಿ.ಜಯಕುಮಾರ್, ಲಲಿತಾ ನಾಟ್ಯಾಲಯ ನೃತ್ಯ ಶಾಲೆಯ ಗುರು ಬಿ.ಆರ್.ಸುನೀತಾ ಶೆಟ್ಟಿ ಮತ್ತು ನೃತ್ಯ ಶಾಲೆಯ ವಿದ್ಯಾರ್ಥಿನಿಯರು ಉದ್ಘಾಟಿಸಿದರು. ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ, ಪ್ರತಿಯೊಂದು ಕಲೆಗೆ ತನ್ನದೇ ಆದ ಮಹತ್ವ ಇದ್ದು, ಈ ಮೂಲಕ ನೃತ್ಯ, ಸಂಗೀತ ಮುಂತಾದ ಕಲೆಗಳು ವಿಶಿಷ್ಟ ಛಾಪು ಮೂಡಿಸಿವೆ. ಕಲೆಯ ಅನೇಕ ಪ್ರಕಾರಗಳಲ್ಲಿ ಭರತನಾಟ್ಯ ಒಂದಾಗಿದೆ. ಇದು ನಮ್ಮ ದೇಶದ ಪುರಾತನ ಶಾಸ್ತ್ರೀಯ ನೃತ್ಯವಾಗಿದೆ ಎಂದರು. ಸುನೀತಾ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.