ಪರಿಸರಸ್ನೇಹಿ ಫಲಪುಷ್ಪ ಪ್ರದರ್ಶನ

Sudhee_29_RD_Flower_Show_2024_Concludes_@_Lalbagh (2)
Published on

ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ’ ಫಲಪುಷ್ಪ ಪ್ರದರ್ಶನವನ್ನು ಪರಿಸರಸ್ನೇಹಿಯಾಗಿ ನಡೆಸುವಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರದರ್ಶನ ವೀಕ್ಷಿಸಲು ಬರುವವರನ್ನು ಲಾಲ್‌ಬಾಗ್‌ನ ನಾಲ್ಕೂ ದ್ವಾರಗಳಲ್ಲೂ ಪರೀಕ್ಷಿಸಿ, ಒಳಗೆ ಕಳುಹಿಸಲಾಗುತ್ತಿತ್ತು. ಈ ವೇಳೆ ನೀರಿನ ಬಾಟಲ್, ಕವರ್‌ಗಳು ಸೇರಿ ಪ್ಲ್ಯಾಸ್ಟಿಕ್ ವಸ್ತುಗಳನ್ನು ಉದ್ಯಾನದೊಳಗೆ ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಉದ್ಯಾನದಲ್ಲಿ ಎಲ್ಲಿಯೂ ಪ್ಲ್ಯಾಸ್ಟಿಕ್ ವಸ್ತುಗಳು ಕಂಡುಬಂದಿಲ್ಲ. ಅಲ್ಲದೆ, ಪ್ರದರ್ಶನ ಸಂದರ್ಭದಲ್ಲಿ ಮಳಿಗೆಗಳನ್ನು ತೆರೆದಿದ್ದ ವ್ಯಾಪಾರಿಗಳು ಸಹ ಪೇಪರ್ ಬ್ಯಾಗ್, ಬಾಳೆ ಎಲೆ, ಅಡಕೆ ತಟ್ಟೆಗಳನ್ನು ಬಳಕೆ ಮಾಡಿದ್ದರು. ಇದರಿಂದಾಗಿ ಈ ಬಾರಿ ಉದ್ಯಾನದಾದ್ಯಂತ ಸಾವಯವ ತ್ಯಾಜ್ಯ ಮಾತ್ರವೇ ದೊರೆತಿದ್ದು, ಸುಮಾರು 4 ಬೃಹತ್ ಲಾರಿ (ಕಾಂಪ್ಯಾಕ್ಟರ್) ಕಸ ಸಂಗ್ರಹವಾಗಿದೆ. ಕಳೆದ ಬಾರಿ ಪ್ಲ್ಯಾಸ್ಟಿಕ್ ಸೇರಿ 8 ಲೋಡ್ ಆಗಿತ್ತು. ಪ್ಲ್ಯಾಸ್ಟಿಕ್ ನಿಷೇಧದಿಂದ ಈ ಬಾರಿ ಪರಿಸರಸ್ನೇಹಿ ಪ್ರದರ್ಶನ ಸಾಧ್ಯವಾಯಿತು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.

ಒಂದೇದಿನದಲ್ಲಿ ತ್ಯಾಜ್ಯ ವಿಲೇವಾರಿ: ಹಿಂದೆಲ್ಲ ಲಪುಷ್ಪ ಪ್ರದರ್ಶನ ನಡೆದಾಗ ಉದ್ಯಾನ ಸ್ವಚ್ಛಗೊಳಿಸಲು ವಾರಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೆ ಬಿಗಿ ನಿಯಮ ಜಾರಿಗೊಳಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಇರಿಸಲಾಗಿದೆ. ಇದರಿಂದ ಈಗ ಉದ್ಯಾನದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದು ತಪ್ಪಿದೆ. ಅಲ್ಲದೆ ಈ ಬಗ್ಗೆ ಜನರೂ ಜಾಗರೂಕರಾಗಿದ್ದಾರೆ ಎಂದರು.

20 ಸಾವಿರ ವೀಕ್ಷಕರು: ಫಲಪುಷ್ಪ ಪ್ರದರ್ಶನ ಭಾನುವಾರಕ್ಕೆ ಅಂತ್ಯಗೊಂಡಿದ್ದು, ಈ ಬಾರಿ 5 ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. ಒಟ್ಟು 2.60 ಕೋಟಿ ರೂ. ಹಣ ಸಂಗ್ರಹವಾಗಿದೆ. ಸೋಮವಾರವೂ ಪ್ರದರ್ಶನ ವೀಕ್ಷಿಸಲು ಟಿಕೆಟ್‌ರಹಿತವಾಗಿ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ 20 ಸಾವಿರಕ್ಕೂ ಅಧಿಕ ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net