

ಉಡುಪಿ: ವಿಧಾನಸಭೆಯಲ್ಲಿ ಗಂಗಾಮತಸ್ಥ, ಮೊಗವೀರ ಸಮುದಾಯಕ್ಕೆ ಸೇರಿದ ಮೀನುಗಾರರ ಸಮುದಾಯದ ಆಡಳಿತ ಪಕ್ಷದ ಏಕೈಕ ಪ್ರತಿನಿಧಿ ಕಾಪು ವಿಧಾನಸಭಾ ಕ್ಷೇತ್ರದ ಲಾಲಾಜಿ ಆರ್. ಮೆಂಡನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಮೊಗವೀರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊಗವೀರ ಹಿತಸಾಧನಾ ವೇದಿಕೆ ಅಧ್ಯಕ್ಷ ಪುಷ್ಪರಾಜ್ ಕೋಟ್ಯಾನ್ ಪಿತ್ರೋಡಿ, ರಾಜ್ಯದಲ್ಲಿ ಮೊಗವೀರ ಸಮುದಾಯಕ್ಕೆ ಸೇರಿದ 39 ವಿವಿಧ ಮೀನುಗಾರ ಸಮುದಾಯ 84 ಲಕ್ಷ ಜನಸಂಖ್ಯೆ ಇದ್ದಾರೆ. ಹೆಚ್ಚಿನ ಜನಸಂಖ್ಯೆ ಇರುವ ಮೊಗವೀರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ ನಿರ್ಲಕ್ಷೃ ಮಾಡಲಾಗಿದೆ. ಈ ಹಿಂದಿನ ಸರ್ಕಾರಗಳಲ್ಲಿ ಮೀನುಗಾರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿತ್ತು ಎಂದರು.
ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಹೆಜಮಾಡಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಮುದಾಯದ ಹೆಚ್ಚಿನ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. 3 ಬಾರಿ ಶಾಸಕರಾಗಿರುವ ಅನುಭವಿ, ಕಳಂಕರಹಿತ ರಾಜಕಾರಣಿ ಲಾಲಾಜಿ ಆರ್. ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಉಚ್ಚಿಲ ಹದಿನಾರು ಪಟ್ನ ಮೊಗವೀರ ಸಭಾ ಅಧ್ಯಕ್ಷ ದಾಮೋದರ ಸುವರ್ಣ, ಉಪಾಧ್ಯಕ್ಷ ಮನೋಜ್ ಕಾಂಚನ್, ದಕ್ಷಿಣ ಕನ್ನಡ ಜಿಲ್ಲೆ ಮೊಗವೀರ ಹಿತಸಾಧನಾ ವೇದಿಕೆ ಕೋಶಾಧಿಕಾರಿ ಸೋಮನಾಥ ಸುವರ್ಣ, ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಮೈಂದನ್ ಸುದ್ದಿಗೋಷ್ಠಿಯಲ್ಲಿದ್ದರು.