

ಕೆ.ವಿ. ಬಲರಾಮು ಕಿಕ್ಕೇರಿ
ಧಾರ್ಮಿಕ, ಭಕ್ತಿ ಪರಂಪರೆಯಲ್ಲಿ ಶ್ರೇಷ್ಠತೆ ಹೊಂದಿರುವ ಗ್ರಾಮಗಳಲ್ಲಿ ಹೋಬಳಿಯ ಲಕ್ಷ್ಮೀಪುರ ಗ್ರಾಮವೂ ಒಂದಾಗಿದೆ.
ಇಡೀ ಊರಿಗೆ ಊರೇ ಹಾಲುಮತಸ್ಥರು ನೆಲೆಸಿದ್ದಾರೆ. ಗ್ರಾಮಕ್ಕೆ ಲಕುಮಿಪುರ, ಲಕ್ಷ್ಮೀಪುರ ಎನ್ನುವುದುಂಟು.
ಕಿಕ್ಕೇರಿ ಹೊರವಲಯದಲ್ಲಿ ನೆಲೆಸಿರುವ ದೇವಿ ಲಕ್ಷ್ಮೀದೇವಿಯ ಮಹಾಭಕ್ತೆ ಹಾಲುಮತದ ಲಕ್ಕಮ್ಮ ನೆಲೆಸಿದ ಊರಿಗೆ ಲಕ್ಷ್ಮೀಪುರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಡೀ ಗ್ರಾಮದವರು ಲಕ್ಷ್ಮೀದೇವಿಯನ್ನು ಪೂಜಿಸಿಕೊಂಡು ಬಂದಿದ್ದು, ಗ್ರಾಮವನ್ನು ಲಕ್ಕಮ್ಮನ ವಠಾರದವರು ಎಂದು ಹೇಳಲಾಗುತ್ತಿದ್ದು, ಗ್ರಾಮಕ್ಕೆ ಲಕ್ಷ್ಮೀಪುರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ.
ಗ್ರಾಮದ ಹಿನ್ನೆಲೆ: ಹಿಂದೆ ಕಿಕ್ಕೇರಿ ಹಾಗೂ ಲಕ್ಷ್ಮೀಪುರ ಗ್ರಾಮಕ್ಕೆ ಸೇರಿದ ಉಜ್ಜಯಿನಿಯಿಂದ ಬಂದು ನೆಲೆಸಿರುವ ಮಹಾಲಕ್ಷ್ಮೀ ದೇವಿಯನ್ನು ಆರಾಧಿಸುತ್ತಿದ್ದ ವಿಪ್ರ ಕುಟುಂಬದವರ ಮನೆಗೆಲಸವನ್ನು ಹಾಲುಮತದ ಬಾಲಕಿ ಲಕ್ಕಮ್ಮ ಮಾಡಿಕೊಂಡು ಬರುತ್ತಿದ್ದಳು. ಜತೆಗೆ ದನಕರು, ಎಮ್ಮೆ ಕಾಯುವಿಕೆ ಮಾಡುತ್ತಿದ್ದಳು.
ಮನೆಯ ಯಜಮಾನರು ನಿತ್ಯವು ಮಹಾಲಕ್ಷ್ಮೀದೇವಿಗೆ ಪೂಜಾ ಕೈಂಕರ್ಯ ನೆರವೇರಿಸಿ ನೈವೇದ್ಯ ಸಮರ್ಪಿಸಿ ದೇವಿಯ ಗುಡಿಯ ಬಾಗಿಲು ಹಾಕಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ಲಕ್ಕಮ್ಮ ಎಲ್ಲವನ್ನು ಮರೆಯಲ್ಲಿ ನೋಡಿ ಅರ್ಚಕರು ಹೊರಗಡೆ ತೆರಳಿದ ನಂತರ ತಾನು ದೇವಿಗೆ ಪೂಜಿಸುತ್ತಿದ್ದಳು. ಈ ಕೈಂಕರ್ಯ ಹಲವು ದಿನಗಳಿಂದ ನಡೆದುಕೊಂಡು ಬರುತ್ತಿತ್ತು.
ಅರ್ಚಕರಿಗೆ ಪೂಜಾ ಕೈಂಕರ್ಯದ ಸಾಮಗ್ರಿ, ನೈವೇದ್ಯ ಬದಲಾವಣೆಯಾಗುತ್ತಿರುವುದನ್ನು ಕಂಡು ದಿಗ್ಭ್ರಮೆಯಾಯಿತು. ಅಂತಿಮವಾಗಿ ಈ ಬದಲಾವಣೆಗೆ ಕಾರಣ ತಮ್ಮ ಮನೆಯ ಕೆಲಸದಾಕೆ ಲಕ್ಕಮ್ಮ ಎಂಬುದನ್ನು ಪತ್ತೆಹಚ್ಚಿದರು. ಊರಿನಲ್ಲಿ ಪಂಚಾಯಿತಿ ಮಾಡಲು ನಿಶ್ಚಯಿಸಲಾಯಿತು. ಪೂಜಾ ವಿಷಯದಲ್ಲಿ ಪಂಥ ಏರ್ಪಡಿಸಲಾಯಿತು. ಗ್ರಾಮ ಮುಖಂಡರ ಅಣತಿಯಂತೆ ಹಾಲುಮತದ ಲಕ್ಕಮ್ಮ ಈ ಹಿಂದೆ ಗ್ರಾಮದಲ್ಲಿದ್ದ ಕೇತಕಿ ನದಿಯಲ್ಲಿ(ಈಗ ಅಮಾನಿಕೆರೆ) ಬಾಳೆಲೆಯ ಮೇಲೆ ಕುಳಿತು ಪೂಜಾ ಸಾಮಗ್ರಿಯೊಂದಿಗೆ ತೇಲುತ್ತ ದೇವಿಯ ಗುಡಿಯವರಿಗೆ ಸಾಗಿ ವಿಜೇತೆಯಾದಳು.
ಲಕ್ಷ್ಮೀದೇವಿಗೆ ದೊಡ್ಡದಾಗಿ ಪುರಸ್ಕಾರ ನಡೆಯಿತು. ಲಕ್ಕಮ್ಮ ನೆಲೆಸಿದ್ದ ಊರಿಗೆ ಲಕ್ಷ್ಮೀಪುರ ಎಂದು ಕರೆಯಲಾಯಿತು. ಜತೆಗೆ ದೇವಿಯ ಪೂಜೆಯನ್ನು ಲಕ್ಕಮ್ಮ ವಠಾರಕ್ಕೆ ಬಿಟ್ಟುಕೊಡಲಾಯಿತು. ವರ್ಷದ ಯುಗಾದಿ ಜಾತ್ರೆಯ ಪಂಚಮಿಯ ಒಂದು ದಿನ ಮಾತ್ರ ವಿಪ್ರರಿಗೆ ಮೀಸಲಾಯಿತು.
ಲಕ್ಕಮ್ಮ ಮದುವೆಯಾದ ನಂತರ ಈ ವಠಾರದವರಾದ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ತಂಡೆಯವರು ಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳುವಂತಾಯಿತು. ಇಲ್ಲಿ ಈ ವಠಾರದವರು ಬಿಟ್ಟರೆ ಇತರ ಜನಾಂಗದವರು ಇಲ್ಲದಿರುವುದು ವಿಶೇಷವಾಗಿದೆ.
ಕಿಕ್ಕೇರಿಗೆ ಕೂಗಳತೆ ದೂರದಲ್ಲಿ ಲಕ್ಷ್ಮೀಪುರ ಇದ್ದು, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು 4,450 ಜನಸಂಖ್ಯೆ ಇದೆ. ಊಗಿನಹಳ್ಳಿ, ತುಳಸಿ, ಬೂವಿನಹಳ್ಳಿ, ಗಂಗೇನಹಳ್ಳಿ, ಮಾದಿಹಳ್ಳಿ, ಊದ್ದಿನಮಲ್ಲನ ಹೊಸೂರು ಸೇರಿದಂತೆ 10 ಗ್ರಾಮ ಸೇರಿದಂತೆ ಗ್ರಾಪಂ. ಕಟ್ಟಡ ಇದೆ. ಇಲ್ಲಿನವರಿಗೆ ಕೃಷಿಯೇ ಜೀವಾಳ. ಬಹುತೇಕ ಕೂಲಿಕಾರ್ಮಿಕರು ಗ್ರಾಮದಲ್ಲಿದ್ದು ಬೆಳಗ್ಗೆ ಗ್ರಾಮದಿಂದ ಹೊರನಡೆದರೆ ಬರುವುದು ಸಂಜೆ ಸೂರ್ಯ ಮುಳುಗಿದ ನಂತರವೇ.
ಹಿಂದೆ ಗ್ರಾಮದಲ್ಲಿ ಪಟೇಲಗಾರಿಕೆಯೇ ಪ್ರಧಾನವಾಗಿತ್ತು. ಗ್ರಾಮದ ಪಟೇಲರು ನೀಡಿದ ನ್ಯಾಯವನ್ನು ಹತ್ತೂರಿನವರು ಪಾಲಿಸುತ್ತಿದ್ದರು. ನ್ಯಾಯ ಸಮ್ಮತವಾದ ತೀರ್ಪು ನೀಡುವ ಗ್ರಾಮ ಎಂದು ಹೆಸರು ಪಡೆದಿತ್ತು. ಕೆಂಚಮೇಸ್ತ್ರಿ, ಕಾಪನಹಳ್ಳಿ, ದೊಳ್ಳಣ್ಣ, ಬೆಣ್ಣೆ ಪುಟ್ಟಪ್ಪ ಈ ರೀತಿ ಉದ್ದುದ್ದ ಸಾಲು ಪಟೇಲರ ಸಾಲುವಳಿ ಇದೆ. ಗ್ರಾಮದಲ್ಲಿ ಸೂರ್ಯೋದಯಕ್ಕೂ ಮುನ್ನ ಏಳುವ ಜನರು ಮೊದಲು ಪೂಜಿಸುವುದು ತಮ್ಮ ಮೂಲಪುರುಷೆ ಲಕ್ಕಮ್ಮಳ ಮೂಲದೇವರು ಲಕ್ಷ್ಮೀದೇವಿಯನ್ನು (ಕಿಕ್ಕೇರಮ್ಮ). ಇದು ಸಣ್ಣ ಮಕ್ಕಳಿಗೂ ರೂಢಿಯಾಗಿದೆ. ಶುಭ ಸಮಾರಂಭ, ಕಾರ್ಯಕಟ್ಟಳೆ ಮಾಡುವ ಮುನ್ನ ಲಕ್ಷ್ಮೀದೇವಿಯ ಅಪ್ಪಣೆಯಾಗಲೇಬೇಕು. ತದನಂತರ ಎಲ್ಲ ಕಾರ್ಯಗಳು ನಡೆಯುವುದು ವಿಶೇಷ. ಹಬ್ಬ ಹರಿದಿನಗಳ ನಿಶ್ಚಯವೂ ಕೂಡ ಇದೇ ರೀತಿಯಾಗುತ್ತದೆ.
ದಾಸಶ್ರೇಷ್ಠ ಕನಕದಾಸರು ದೇಶ ಪರ್ಯಟನೆ ಕಾಲದಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳುವಾಗ ಗ್ರಾಮದಲ್ಲಿನ ಮಹಾನವಮಿ ಮಂಟಪದಲ್ಲಿ ತಂಗಿದ್ದರು. ಈ ಸಲುವಾಗಿ ಮಂಟಪಕ್ಕೆ ಅವರ ಹೆಸರೇ ಇಡಲಾಗಿದೆ ಎನ್ನಲಾಗುತ್ತದೆ.
ಗ್ರಾಮದ ಬಹುತೇಕ ರಸ್ತೆಗಳು ನರೇಗಾ ಯೋಜನೆಯಡಿ ಅಭಿವೃದ್ಧಿ ಕಂಡಿವೆ. ಮತ್ತಷ್ಟು ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕಿದೆ. ಒಳಚರಂಡಿ ವ್ಯವಸ್ಥೆ ಅಷ್ಟಕಷ್ಟೆಯಾಗಿದೆ. ಗುಣಮಟ್ಟದ ಒಳಚರಂಡಿ ವ್ಯವಸ್ಥೆ ತ್ವರಿತವಾಗಿ ಆಗಬೇಕಿದೆ. ಕುರಿ ಸಾಕಣೆ ಪ್ರಧಾನವಾಗಿದ್ದ ಗ್ರಾಮದಲ್ಲಿ ಇಂದು ಬೆರಳೆಣಿಕೆ ಕುರಿಗಾಹಿಗಳಿದ್ದು, ಹೈನುಗಾರಿಕೆ ಕಸುಬು ಮಾಡಿಕೊಂಡಿದ್ದಾರೆ. ಜಮೀನುಗಳಿಗೆ ಮುಯ್ಯಿ ಆಳು ಪದ್ಧತಿ ಇದ್ದ ಗ್ರಾಮದಲ್ಲಿ ಇಂದು ಕೂಲಿ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಇದೆ.
ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನ್ಯಾಯಬೆಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಹಲವು ಸ್ವಸಹಾಯ ಸಂಘಗಳು ಇವೆ. ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯವಿದೆ. ಜಲಜೀವನ್ ಮಿಷನ್ ಯೋಜನೆಗೆ ಕಾಮಗಾರಿ ಆರಂಭವಾಗಿದ್ದು ತ್ವರಿತವಾಗಿ ಶುದ್ಧ ಗಂಗೆ ವಿತರಣೆಯಾಗಬೇಕಿದೆ. ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಇರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದೆ. ಟ್ಯಾಂಕ್ ಮೂಲಕ ನೀರು ಸರಬರಾಜು ಸ್ಥಗಿತವಾಗಿದೆ. ನಾಲ್ಕೈದು ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಗ್ರಾಮಸ್ಥರಿಗೆ ಸಮರ್ಪಕ ನೀರು ಸಿಗದಾಗಿದೆ.
ಬೇಸಿಗೆಯಲ್ಲಿ ಅಂರ್ತಜಲ ಕುಸಿದು ನೀರಿಗೆ ಸಮಸ್ಯೆ ಉಂಟಾಗಿದ್ದು, ಖಾಸಗಿ ಜಮೀನು ಮಾಲೀಕರಲ್ಲಿ ನೀರಿಗಾಗಿ ಗೋಗರೆಯುವ ಸ್ಥಿತಿ ಇದೆ. ಗ್ರಾಮಕ್ಕೆ ತ್ಯಾಜ್ಯ ವಿಲೇವಾರಿಯ ಸಮಸ್ಯೆ ದೊಡ್ಡದಾಗಿ ಕಾಡಿದೆ. ರಾಜ್ಯ ಹೆದ್ದಾರಿಯ ಬದಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಸೊಳ್ಳೆ ಹಾಗೂ ದುರ್ವಾಸನೆ ಬೀರುವಂತಾಗಿದೆ. ಸಂಬಂಧಪಟ್ಟವರು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
ಗ್ರಾಮದ ಹೃದಯಭಾಗದಲ್ಲಿ ಸಿದ್ದರಾಮಲಿಂಗೇಶ್ವರ ದೇಗುಲವಿದೆ. ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದಲ್ಲಿ ವಿಶೇಷ ದರ್ಶನ, ಪೂಜೆ ನಡೆಯುತ್ತದೆ. ಗ್ರಾಮದ ಹೊರವಲಯದಲ್ಲಿ ಶನಿದೇವರ ಗುಡಿ, ಲಕ್ಷ್ಮೀದೇವಿ ಗುಡಿ, ದಸರಾ ಮಹಾನವಮಿ ಮಂಟಪ, ಮಾರಮ್ಮ ಗುಡಿ, ಭೂತಪ್ಪ ದೇಗುಲವಿದೆ.
ಯುಗಾದಿಯ ನಂತರದ ವಾರಗಟ್ಟಲೆಯ ಜಾತ್ರೆ, ಪಿತೃಪಕ್ಷ, ವಿಜಯದಶಮಿ, ಮುನಿಯಪ್ಪ ಹಬ್ಬ, ಬಸವೇಶ್ವರನಿಗೆ ಚರ್ಪು ಹಾಕುವುದು, ಕನ್ನಂಬಾಡಮ್ಮನ ಹಬ್ಬ ವಿಶೇಷ ರೀತಿಯಲ್ಲಿ ಜರುಗುತ್ತದೆ. ಜಾತ್ರೆ ಸಮಯದಲ್ಲಿ ಗ್ರಾಮಸ್ಥರು ವಾರಗಟ್ಟಲೆ ಉಪವಾಸವಿದ್ದು ದೇವಿಯನ್ನು ಆರಾಧಿಸುತ್ತಾರೆ.