

ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದಲ್ಲಿ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಮುಂಜಾನೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಲಕ್ಷ್ಮಿನಾರಾಯಣಸ್ವಾಮಿ ದೇವಾಲಯವನ್ನು ತಳಿರುತೋರಣ, ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಲಾಗಿದ್ದ ಬ್ರಹ್ಮರಥದಲ್ಲಿ ಇಡಲಾಯಿತು. ಅರ್ಚಕ ರಂಗನಾಥ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ವಿಪ್ರರು ಸ್ವಾಮಿಗೆ ಪೂಜಾ ಕಂಕೈರ್ಯ ನೆರವೇರಿಸಿದರು.
ತಹಸೀಲ್ದಾರ್ ಲೋಕೇಶ್ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಉಘೇ ಲಕ್ಷ್ಮೀ ನಾರಾಯಣ ಉಘೇ.ಉಘೇ ! ನಾರಾಯಣ…ಗೊವಿಂದ ಗೋವಿಂದ ಉಘೇ ..ಉಘೇ ಎಂದು ಘೋಷಣೆ ಕೂಗುವ ಮೂಲಕ ರಥದ ಮೇಲೆ ಹಣ್ಣು ದವನ ಎಸೆದು ಪ್ರಾರ್ಥನೆ ಸಲ್ಲಿಸಿದರು.
ಮುಜರಾಯಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಗಿರೀಶ್, ಟಿಎಪಿಸಿಎಂಎಸ್ ಎಚ್.ಟಿ.ಲೋಕೇಶ್, ಸಿಂಧುಘಟ್ಟ ಗಿರೀಶ್, ಕುಮಾರಸ್ವಾಮಿ, ಶಿವಕುಮಾರ್ ಸೇರಿದಂತೆ ಭಕ್ತರು ಬಾಗವಹಿಸಿದ್ದರು.