ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಹೊರಕೆರೆ ದೇವರಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಸ್ವಾಮಿಯ ರಥವನ್ನು ಎಳೆಯುವ ಕ್ಷಣವಾದ ವೃಶ್ಚಿಕಾ ಲಗ್ನ, ಪುಬ್ಬಾ ನಕ್ಷತ್ರದ ಸಮಯಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅನೇಕ ಭಕ್ತಸಮೂಹ ಕಾತರದಿಂದ ಕಾಯುತ್ತಿದ್ದರು. ‘ಬ್ರಹ್ಮರಥೋತ್ಸವ’ಕ್ಕೆ ಚಾಲನೆ ದೊರೆಯುತ್ತಿದ್ದಂತೆ ಲಕ್ಷ್ಮೀನರಸಿಂಹ ಸ್ವಾಮಿಗೆ ಜೈ, ಹೊರಕೆರೆ ರಂಗಪ್ಪನಿಗೆ ಜೈ, ಗೋವಿಂದಾ, ಗೋವಿಂದಾ, ಗೋವಿಂದಾ ಎಂದು ಜಯಘೋಷ ಮೊಳಗಿಸಿದರು. ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.
ರಥೋತ್ಸವದ ಅಂಗವಾಗಿ ರಥದ ಸುತ್ತಲೂ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಬೆಳಗ್ಗೆ ಅಭಿಷೇಕ, ಪುಷ್ಪಾಲಂಕಾರ ಸೇವೆ, ಆನೆ ಉತ್ಸವ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು. ರಥ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೂ ಮುನ್ನ ಪುಷ್ಪಾಲಂಕೃತ ಸ್ವಾಮಿಯ ಉತ್ಸವಮೂರ್ತಿಯನ್ನು ಬೆಳ್ಳಿಯ ಗರುಡವಾಹನದಲ್ಲಿ ಪ್ರತಿಷ್ಠಾಪಿಸಿ ದೇಗುಲದಿಂದ ರಥಮಂಟಪದ ಬಳಿಗೆ ಸುಸಜ್ಜಿತ ಉಚ್ಛಾಯದಲ್ಲಿ ಕರೆತರಲಾಯಿತು. ಇಲ್ಲಿ ಪೂಜೆ ಸಲ್ಲಿಸಿ, ಒಂದು ಬಾರಿ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ ಸೇರಿ ಇತರೆ ಗಣ್ಯರು ಪಾಲ್ಗೊಂಡಿದ್ದರು.
ಗರುಡ ಪ್ರದಕ್ಷಿಣೆ
ಸ್ವಾಮಿಯ ಬ್ರಹ್ಮರಥೋತ್ಸವ ಜರುಗುವ ವೇಳೆ ಗರುಡ ಹಾರಿಬಂದು ರಥವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದರೆ ಮಾತ್ರ ರಥ ಮುಂದೆ ಸಾಗುವ ಪರಂಪರೆ ಇದೆ. ಅದರಂತೆ ಈ ಬಾರಿಯೂ ಸಂಜೆ 4ಕ್ಕೆ ಎರಡ್ಮೂರು ಗರುಡ ಬಂದು ಪ್ರದಕ್ಷಿಣೆ ಹಾಕಿದಾಗ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಇವು ಎಲ್ಲಿಂದ ಬರುತ್ತವೇ, ಹೋಗುತ್ತವೇ ಎಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಇದು ಸ್ವಾಮಿಯ ಮಹಿಮೆ ಎಂಬುದು ಈ ಭಾಗದ ಭಕ್ತರ ನಂಬಿಕೆ.
1.9 ಲಕ್ಷಕ್ಕೆ ಹಾರ ಹರಾಜು
ಪ್ರತಿ ವರ್ಷದಂತೆ ರಥಕ್ಕೆ ಹಾಕುವ ಹಾರವನ್ನು ದೇಗುಲ ಸಮಿತಿಯ ಪದಾಧಿಕಾರಿಗಳು ಹರಾಜು ಹಾಕಿದರು. ಈ ಬಾರಿ 10 ಸಾವಿರ ರೂ.ನಿಂದ ಆರಂಭವಾದ ಪ್ರಕ್ರಿಯೆ 1.9 ಲಕ್ಷ ರೂ.ಗೆ ಕೊನೆಗೊಂಡಿತು. ಕೆ.ಎಚ್.ರಂಗನಾಥ ಎಂಬುವವರು ಹರಾಜಿನಲ್ಲಿ ಸ್ವಾಮಿಯ ಹಾರವೊಂದನ್ನು ಪಡೆದುಕೊಂಡರು.