

ಬೀರೂರು: ಹೊಗರೇಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ರಥೋತ್ಸವ ಬುಧವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಮಂಗಳವಾರ ಬೆಳಗ್ಗೆ ಸ್ವಸ್ತಿವಾಚನ, ದೇವತಾರಾಧನೆ, ನಿತ್ಯಹೋಮ, ಬಲಿಪ್ರದಾನ, ವೈಭವೋತ್ಸವ ಮತ್ತು ಲಕ್ಷ್ಮೀರಂಗನಾಥಸ್ವಾಮಿ ಅವರ ಕಲ್ಯಾಣೋತ್ಸವ, ಗಜವಾಹನೋತ್ಸವ ನೆರವೇರಿತು. ರಜತನಾಣ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ಅಲಂಕೃತ ಶ್ರೀದೇವಿ, ಭೂದೇವಿ ಸಹಿತ ಸ್ವಾಮಿ ಉತ್ಸವಮೂರ್ತಿಗಳನ್ನು ರಥಾರೋಹಣಕ್ಕಾಗಿ ಮಂಟಪಕ್ಕೆ ಕರೆತಂದು ಅಲ್ಲಿ ಮಂಟಪಡಿ ಸೇವೆ, ಶ್ರೀಕೃಷ್ಣ ಗಂಧೋತ್ಸವ, ರಥಾರೋಹಣ ನಡೆಸಲಾಯಿತು.
ರಥದ ಬಾವುಟವನ್ನು ಶಿವಮೊಗ್ಗದ ಶ್ರೀನಿವಾಸ್ ಎಂಬುವವರು 1.50 ಲಕ್ಷ ರೂ. ಹರಾಜು ಕೂಗಿ ಸ್ವಾಮಿ ಮೊದಲ ಪೂಜೆಗೆ ಭಾಜನರಾದರು. ನಂತರ ರಥದಲ್ಲಿದ್ದ ಸ್ವಾಮಿಗೆ ಮಹಾಮಂಗಳಾರತಿ ನಡೆಸಿ, ಕದಳಿಚ್ಛೇದನದನದ ನಂತರ ಮೀಸಲು ಮತ್ತು ಒಕ್ಕಲಿನ ಗ್ರಾಮಗಳ ಭಕ್ತರಿಗೆ ತೆಂಗಿನಕಾಯಿ ನೀಡಿ ರಥದ ಚಕ್ರಕ್ಕೆ ಸಮರ್ಪಿಸುವಂತೆ ಸೂಚಿಸಲಾಯಿತು. ಬಿರುದು ಬಾವಲಿಗಳ ನಡುವೆ ಭಕ್ತರು ವಾದ್ಯಮೇಳಗಳ ಹಿಮ್ಮೇಳದಲ್ಲಿ ಲಕ್ಷ್ಮೀ ರಂಗನಾಥಸ್ವಾಮಿ ಪಾದಕ್ಕೆ ನಮೀಸಿ ರಥವನ್ನು ಎಳೆದರು. ರಥದಲ್ಲಿದ್ದ ಸ್ವಾಮಿಗೆ ಮಂಗಳಾರತಿ ಅರ್ಪಿಸಿದ ಭಕ್ತರು ಹಣ್ಣು, ಕಾಯಿ ಮಾಡಿಸಿದರೆ ಹರಕೆ ಹೊತ್ತವರು ರಥದ ಕಲಶಕ್ಕೆ ಬಾಳೆಹಣ್ಣು, ದವನಗಳನ್ನು ಎಸೆದು ಕೋರಿಕೆ ಈಡೇರಿಕೆಗಾಗಿ ಪ್ರಾರ್ಥಿಸಿದರು. ಸಿದ್ದೇಶ್ವರ ಸ್ವಾಮಿ ಸಮಿತಿಯಿಂದ ಭಕ್ತರಿಗೆ ಪಾನಕ-ಪನಿವಾರ ವಿತರಿಸಿದರು. ದೇವಾಲಯ ಸಮಿತಿ ಅನ್ನ ಸಂತರ್ಪಣೆ ನಡೆಯಿತು. ರಥಕ್ಕೆ ಮಂಗಳಾತಿ ಮಾಡಿಸಿದ ಭಕ್ತರು ನಂತರ ದೇವಾಲಯಕ್ಕೆ ತೆರಳಿ ಮೂಲಮೂರ್ತಿ ದರ್ಶನ ಪಡೆದರು. ಸಂಜೆ ರಥಾವರೋಹಣ, ಶೇಷ ವಾಹನೋತ್ಸವ, ಶಯನೋತ್ಸವ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಭಾನುವಾರದವರೆಗೂ ವಿವಿಧ ಕಾರ್ಯಕ್ರಮಗಳ ಬಳಿಕ ರಥೋತ್ಸವಕ್ಕೆ ತೆರೆ ಬೀಳಲಿದೆ.