ಹಿರಿಯರ ಸ್ಮರಣೆ ಕಲೆಯ ರಕ್ಷಣೆಗೆ ಸಹಕಾರಿ : ಲಕ್ಷ್ಮೀ ನಾರಾಯಣ ಭಟ್ಟ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕಾರ್ಣಿಕ್ ಅಭಿಮತ

New Project (22)
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಹರಿಕಥಾ ರಂಗಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಖ್ಯಾತ ತಬ್ಲಾ ವಾದಕ ಕೀರ್ತಿಶೇಷ ಎಂ.ಲಕ್ಷ್ಮೀ ನಾರಾಯಣ ಭಟ್ಟರಂತಹ ಹಿರಿಯ ಕಲಾವಿದರ ಸಂಸ್ಮರಣೆ ಯುವಕಲಾವಿದರಿಗೆ ಪ್ರೇರಣೆ. ಜತೆಗೆ, ಹರಿಕಥಾ ಪರಂಪರೆಯ ಪೋಷಣೆಗೆ ಸಹಕಾರಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.

ಶರವು ದೇವಸ್ಥಾನ ರಸ್ತೆಯ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿ ಹರಿಕಥಾ ಪರಿಷತ್ ಆಯೋಜಿಸಿದ್ದ ವಿದ್ವಾನ್ ಎಂ. ಲಕ್ಷ್ಮೀ ನಾರಾಯಣ ಭಟ್ ಸ್ಮರಣಾರ್ಥ ಹರಿಕಥಾ ಸಪ್ತಾಹದಲ್ಲಿ ಬೆಂಗಳೂರಿನ ನಾರದೀಪ್ರಕಾಶನ ಪ್ರಕಟಿಸಿದ ಲಕ್ಷ್ಮೀ ನಾರಾಯಣ ಭಟ್ಟರ ಕುರಿತ ಕೃತಿ (ನುಡಿನಮನ) ಬಿಡುಗಡೆಗೊಳಿಸಿ ಇತ್ತೀಚೆಗೆ ಮಾತನಾಡಿದರು.

ರಾಧಾಕೃಷ್ಣ ದೇವಸ್ಥಾನದ ಅರ್ಚಕ ಎಂ.ಕೇಶವ ಭಟ್ ಹರಿಕಥಾ ಸಪ್ತಾಹವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಹರಿಕಥಾ ರಂಗಕ್ಕೆ ಲಕ್ಷ್ಮೀ ನಾರಾಯಣ ಭಟ್ಟರ ಕೊಡುಗೆಯನ್ನು ಸ್ಮರಿಸಿದರು. ನುಡಿನಮನ ಪುಸ್ತಕದ ಸಂಪಾದಕ ಡಾ.ಎಲ್.ದತ್ತಾತ್ರೇಯ ವೇಲಣ್ಕರ್, ಜರ್ಮನಿಯಲ್ಲಿ ತಂತ್ರಜ್ಞರಾಗಿರುವ ಲಕ್ಷ್ಮೀನಾರಾಯಣ ಭಟ್ಟರ ಪುತ್ರ ಅನಂತಕೃಷ್ಣ ಭಟ್, ಕಲಾವಿದ ರಾಜೇಂದ್ರ ಭೆಂಡೆ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ಬಿ.ನಾರಾಯಣ ರಾವ್ ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಸಂಚಾಲಕ ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಕೋಶಾಧಿಕಾರಿ ಡಾ.ಎಸ್.ಪಿ.ಗುರುದಾಸ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪಂಡಿತ್ ದತ್ತಾತ್ರೇಯ ವೇಲಣ್ಕರ್ ‘ಶ್ರೀದೇವೀ ಮಹಾತ್ಮ್ಯೆ: ಗಾನ ಕಥಾಕೀರ್ತನೆ’ ನಡೆಸಿಕೊಟ್ಟರು. ಯೋಗೀಶ್ ಭಟ್ ತಬ್ಲಾ ಹಾಗೂ ಪ್ರಸಾದ ಕಾಮತ್ ಹಾರ್ಮೋನಿಯಂ, ಶ್ರದ್ಧಾ ಗುರುದಾಸ್ ತಾಳದಲ್ಲಿ ಸಹಕರಿಸಿದರು. ಇದಕ್ಕೆ ಮುಂಚಿತವಾಗಿ ಯುವ ಕೀರ್ತನಗಾರ್ತಿ ಗಾಯತ್ರೀ ಆಚಾರ್ಯ ಕೊಂಡೆವೂರು ‘ಕನಕನಿಗೊಲಿದ ಗೋವಿಂದ’ ಎಂಬ ಹರಿಕಥೆ ಪ್ರಸ್ತುತಪಡಿಸಿದರು. ಶ್ರಾವಣ್ಯ ಹಾಗೂ ಗುರು ಅಭಿಷೇಕ್ ಹಿಮ್ಮೇಳದಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net